Site icon Vistara News

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Karnataka Council Election

Karnataka Council Election: New Formula Has Been Made In Congress Leaders For Candidates Selection

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 11 ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯು (Karnataka Legislative Council Election) ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದೆ. ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D K Shivakumar) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿ ಹಲವು ನಾಯಕರ ಆಪ್ತರು ಲಾಬಿ ನಡೆಸುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್‌ ನಾಯಕರು ಭಿನ್ನಮತವೇ ಬೇಡ ಎಂದು 2+2+2+1=7 ಫಾರ್ಮುಲಾ ಕಂಡು ಹಿಡಿದಿದ್ದಾರೆ ಎಂದು ತಿಳಿದಬಂದಿದೆ.

ಯಾರಿಗೆ ಸ್ಥಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊಂದಲ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಫಾರ್ಮುಲಾ ಕಂಡು ಹಿಡಿಯಲಾಗಿದೆ. ಎರಡು ಸ್ಥಾನ ಸಿದ್ದರಾಮಯ್ಯ ಬಣಕ್ಕೆ, ಎರಡು ಸ್ಥಾನ ಡಿಕೆಶಿ ಬಣಕ್ಕೆ, ಇನ್ನೆರಡು ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹಾಗೂ ಒಂದು ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್ ತೀರ್ಮಾನಿಸುತ್ತದೆ. ಇನ್ನು ಏಳು ಸ್ಥಾನಗಳಿಗಾಗಿ 50 ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದು, ಯಾರು ಯಾವ ಬಣದಲ್ಲಿದ್ದಾರೆ ಎಂಬುದರ ಮೇಲೆ ಮಣೆ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.

ಯಾವ ಸಮುದಾಯಕ್ಕೆ ಯಾವ ನಾಯಕ ಮಣೆ ಹಾಕುತ್ತಿದ್ದಾರೆ? ಯಾರ ಯಾರ ಪರ, ಯಾರು ಲಾಬಿ ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಹೀಗಿದೆ.

ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ( ಕುರುಬ), ಕೆ.ಗೋವಿಂದ ರಾಜು ( ಒಕ್ಕಲಿಗ), ಎಚ್.ಎಂ. ರೇವಣ್ಣ ( ಕುರುಬ), ವಿ.ಆರ್. ಸುದರ್ಶನ್ (ಗಾಣಿಗ).

ಡಿ.ಕೆ ಶಿವಕುಮಾರ್
ಸಿಗುವ ಎರಡು ಸ್ಥಾನಕ್ಕೆ ವಿಜಯ್ ಮುಳಗುಂದ್ ( ಬ್ರಾಹ್ಮಣ), ವಿನಯ್ ಕಾರ್ತಿಕ್ (ಒಕ್ಕಲಿಗ), ಬಿ.ಎಲ್. ಶಂಕರ್ (ಒಕ್ಕಲಿಗ) ರಮೇಶ್ ಬಾಬು (ಬಲಿಜ), ಐಶ್ವರ್ಯ ಮಹದೇವ ( ಕುರುಬ), ನಟರಾಜ ಗೌಡ ( ಒಕ್ಕಲಿಗ), ನಲಪಾಡ್ ( ಮುಸ್ಲಿಂ) ಅವರು ಲಾಬಿ ನಡೆಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ
ಮುದ್ದುಗಂಗಾಧರ್ (ಖರ್ಗೆ ಆಪ್ತ), ಸೂರಜ್ ಹೆಗ್ಡೆ , ಪುಷ್ಪ ಅಮರನಾಥ (ದಲಿತ), ಮುಂಡರಗಿ ನಾಗರಾಜ್ (ದಲಿತ), ವಿ.ಆರ್. ಸುದರ್ಶನ್ (ಗಾಣಿಗ), ಕರಡಿ ಸಂಗಣ್ಣ (ಲಿಂಗಾಯತ), ಹುಸೇನ್ (ಮುಸ್ಲಿಂ)

ಹೈಕಮಾಂಡ್
ಬೋಸರಾಜು (ಹಾಲಿ ಸಚಿವ)

ದೆಹಲಿಗೆ ತೆರಳಲು ಸಿದ್ದು, ಡಿಕೆಶಿ ತೀರ್ಮಾನ

ಕಾಂಗ್ರೆಸ್‌ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಶಾರ್ಟ್‌ ಲಿಸ್ಟ್‌ ಹಿಡಿದುಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಮೇ 28, 29ರಂದು ದೆಹಲಿಯಲ್ಲಿರಲಿರುವ ಇಬ್ಬರೂ ನಾಯಕರು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಿದ್ದಾರೆ. ಇದಾದ ಬಳಿಕವೇ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Exit mobile version