ಬೆಂಗಳೂರು: ಕರ್ನಾಟಕದ ಎಲ್ಲ ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ಖರೀದಿಸುವ ಕಾರ್ಯವನ್ನು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯೇ(ಎಸ್‌ಡಿಎಂಸಿ) ಮಾಡಬೇಕು ಎಂದು ರಾಜ್ಯ ಸರ್ಕಾರ (Karnataka Education) ಆದೇಶಿಸಿದೆ. ಹಾಗೂ ಯಾವುದೇ ಕಾರಣಕ್ಕೆ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ, ಸಿಆರ್‌ಪಿಗಳು ತಲೆ ಹಾಕುವಂತಿಲ್ಲ ಎಂದು ಎಚ್ಚರಿಸಿದೆ.
ಈ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರಾಥಮಿಕ ಶಾಲಾ (1-8) ಮಕ್ಕಳಿಗೆ ಒಂದು ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ಖರೀದಿಸಲು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ನೇರವಾಗಿ ಹಣ ನೀಡಲಾಗುತ್ತದೆ.
ಎಲ್ಲ ಅರ್ಹ ವಿದ್ಯಾರ್ಥಿಗಳ ಪಾದರಕ್ಷೆ ಅಳತೆಯನ್ನು ದಾಖಲಿಸಿ, ಸರ್ಕಾರ ತಿಳಿಸಿರುವ ಗುಣಮಟ್ಟಕ್ಕೆ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಸ್ಥೆಗಳಿಂದ ಖರೀದಿ ಮಾಡಬೇಕು. ಕನಿಷ್ಠ ಮೂರು ಸಂಸ್ಥೆಗಳಿಂದ ಕೊಟೇಷನ್ ಪಡೆದು ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ತಿಳಿಸಲಾಗಿದೆ.
1-5ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ಖರೀದಿಗೆ ತಲಾ 265 ರೂ., 6-8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ. ಹಾಗೂ 9-10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ. ದರ ನಿಗದಿಪಡಿಸಲಾಗಿದೆ. ಹೆಚ್ಚು ಮಳೆಯಿರುವ ಮಲೆನಾಡು ಹಾಗೂ ಹೆಚ್ಚು ಬಿಸಿಲಿರುವ ಉತ್ತರ ಕರ್ನಾಟಕದಂತಹ ವಿಭಿನ್ನ ಸನ್ನಿವೇಷಗಳಿಗೆ ಅಗತ್ಯವೆನಿಸಿದರೆ ಶೂ ಬದಲಿಗೆ ಸ್ಯಾಂಡಲ್‌ಗಳನ್ನು ಖರೀದಿಸಲೂ ಅವಕಾಶ ನೀಡಲಾಗಿದೆ.
ಖರೀದಿಯಲ್ಲಿ ಯಾವುದೇ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಅಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಪ್ರತಿ ಶಾಲೆಯೂ ಪ್ರತ್ಯೇಕವಾಗಿ ಖರೀದಿ ಮಾಡಬೇಕು. ಯಾವುದೇ ಕಾರಣಕ್ಕೆ ಹಲವು ಶಾಲೆಗಳು ಒಟ್ಟಾಗಿ ಅಥವಾ ಕ್ಲಸ್ಟರ್ ಮಟ್ಟದಲ್ಲಿ ಖರೀದಿ ಮಾಡುವಂತಿಲ್ಲ. ಖರೀದಿ ಪ್ರಕ್ರಿಯೆ ಮುಗಿದ ನಂತರ ಯಾದೃಚ್ಛಿಕವಾಗಿ ಶೇ. 5 ಶಾಲೆಗಳಲ್ಲಿ ಉಪನಿರ್ದೇಶಕರುಗಳು ಪರಿಶೀಲನೆ ನಡೆಸಬೇಕು ಎಂದು ತಿಳಿಸಲಾಗಿದೆ.
ಸುತ್ತೋಲೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.