Site icon Vistara News

Karnataka Election : ಗದಗ ಜಿಲ್ಲೆಯ ಎರಡು ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆರಹಿತ 20 ಲಕ್ಷ ರೂ. ಜಪ್ತಿ

Gadag money sieze

#image_title

ಗದಗ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election) ಸನ್ನಿಹಿತವಾಗುತ್ತಿದ್ದಂತೆಯೇ ಅಕ್ರಮ ಹಣ ಸಾಗಾಟ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿವೆ. ಹಣ ಮಾತ್ರವಲ್ಲದೆ, ಮದ್ಯ, ಸೀರೆ ಮತ್ತಿತರ ವಸ್ತುಗಳನ್ನೂ ವ್ಯಾಪಕವಾಗಿ ಸಾಗಿಸಲಾಗುತ್ತಿದೆ. ಮತದಾರರಿಗೆ ಹಂಚುವ ಉದ್ದೇಶದಿಂದ ಇವುಗಳನ್ನು ಸಾಗಿಸಿ ಶೇಖರಿಸಿ ಇಡುತ್ತಿರುವುದು ಸ್ಪಷ್ಟವಾಗಿದೆ.

ಹೀಗಾಗಿ ಚುನಾವಣಾ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಎಸ್‌ಪಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಕಣ್ಗಾವಲು ಇಡಬೇಕು ಎಂದು ಹೇಳಿದೆ. ಹೀಗಾಗಿಹಲವು ಕಡೆಗಳಲ್ಲಿ ದೊಡ್ಡ ಮೊತ್ತದ ಹಣ, ಸೀರೆ ಮತ್ತಿತರ ವಸ್ತುಗಳು ವಶವಾಗುತ್ತಿವೆ.

ಗದಗ ಜಿಲ್ಲೆಯಲ್ಲಿ ವಶವಾದ ದಾಖಲೆರಹಿತ ಹಣ

ಮುಳಗುಂದ ಚೆಕ್‌ಪೋಸ್ಟ್‌ನಲ್ಲಿ 15 ಲಕ್ಷ ರೂ. ವಶ

ಗದಗ ನಗರದ ಮುಳಗುಂದ ರಸ್ತೆಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ವಶವಾಗಿದೆ. ಶಿಗ್ಗಾವಿ ತಾಲೂಕಿನ ಹುಲಗೂರನಿಂದ ದೇವದುರ್ಗಕ್ಕೆ ಹೊರಟಿದ್ದ ಕಾರನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ರಾಮಗೇರಿ ಚೆಕ್‌ ಪೋಸ್ಟ್‌ನಲ್ಲಿ 4.55 ಲಕ್ಷ ರೂ. ವಶಕ್ಕೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 4.55 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುವಾಗ ಪೊಲೀಸರಿಂದ ಜಪ್ತಿ ಮಾಡಲಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಬಾಲೆಹೋಸೂರಿನಿಂದ ಹುಬ್ಬಳ್ಳಿಗೆ ಕಾರಿನ ಮೂಲಕ ಹೋಗಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಿಎಸ್‌ಐ ಪ್ರಕಾಶ ಡಿ. ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಲಾಗಿದೆ. ಹಣದ ಬಗ್ಗೆ ದಾಖಲೆ ಕೇಳಿದಾಗ ಕಾರಿನಲ್ಲಿದ್ದವರ ಬಳಿ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ದಾಖಲೆ ತೋರಿಸಿ ಹಣವನ್ನು ಪಡೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ. ಲಕ್ಷ್ಮೇಶ್ವರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ತಂಬಾಕು ಸೀಜ್

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1.8 ಲಕ್ಷ ರೂ. ಮೌಲ್ಯದ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ. ಗದಗದಿಂದ ಕೊಪ್ಪಳ ಕಡೆಗೆ ಹೊರಟಿದ್ದ 407 ವಾಹನವನ್ನು ತಡೆದು ನಿಲ್ಲಿಸಿದಾಗ ಭಾರಿ ಪ್ರಮಾಣದ ತಂಬಾಕು ಪತ್ತೆಯಾಯಿತು. ಆದರೆ, ಅದರ ಸಾಗಾಟಕ್ಕೆ ಸಂಬಂಧಿಸಿ ಚಾಲಕ ಸಿರಾಜ್‌ ನಾಗರಕಟ್ಟಿ ಬಳಿ ಯಾವುದೇ ದಾಖಲೆ ಇರಲಿಲ್ಲ.

ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ತಂಬಾಕು

ಈ ನಡುವೆ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ 10 ಸಾವಿರ ರೂಪಾಯಿ ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದೆ. ರಾಣೆಬೆನ್ನೂರಿ ನಿಂದ ಶಿರಹಟ್ಟಿ ಕಡೆಗೆ ಸಾಗಾಟ ಮಾಡುತ್ತಿದ್ದ ತಂಬಾಕನ್ನು ವಶಪಡಿಸಿಕೊಂಡು ಶ್ಯಾಮ ನವಲೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಶಿರಹಟ್ಟಿ ಹಾಗೂ ಮುಂಡರಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿವೆ.

ಇದನ್ನೂ ಓದಿ : Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

Exit mobile version