ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಹುಮತ ಪಡೆದಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಯ (Chief ministership) ಫೈಟ್ ಮುಂದುವರಿದಿದೆ. ಮಂಗಳವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಡುವಿನ ಮುಖಾಮುಖಿ ಸಭೆ ನಡೆಯಲಿದೆ. ಇದರಲ್ಲಿ ಇಬ್ಬರೂ ತಮ್ಮನ್ನೇ ಏಕೆ ಸಿಎಂ ಮಾಡಬೇಕು ಎಂಬ ವಾದವನ್ನು ಮಂಡಿಸುವ ಸಾಧ್ಯತೆಗಳಿವೆ. ಇಬ್ಬರೂ ತಮಗೇ ಪೂರ್ಣಾವಧಿ ಸಿಎಂ ಪಟ್ಟ ಕೊಡಬೇಕು ಎಂಬ ಬೇಡಿಕೆಯನ್ನು ಮಂಡಿಸಲಿದ್ದಾರೆ, ಒಂದು ವೇಳೆ ಅದಕ್ಕೆ ಹೈಕಮಾಂಡ್ ಒಪ್ಪದೆ ಹೋದರೆ 50: 50 ಸೂತ್ರಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಆದರೆ, ಇಲ್ಲಿ ಕೂಡಾ ಮೊದಲು ಯಾರು ಸಿಎಂ ಆಗಬೇಕು ಎನ್ನುವುದು ಗೊಂದಲ ಸೃಷ್ಟಿಸಲಿದೆ. ಯಾಕೆಂದರೆ, ಇಬ್ಬರೂ ಮೊದಲು ನಾನು ಎಂಬ ವಾದವನ್ನು ಮಂಡಿಸುವ ಸಾಧ್ಯತೆ ಕಂಡುಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮುಂಜಾನೆಯ ಹೈಕಮಾಂಡ್ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ರಾಜ್ಯ ನಾಯಕರ ಚರ್ಚೆ ನಡೆಯಲಿದೆ.
ಮುಖಾಮುಖಿಯಾಗಿ ನಡೆಯುವ ಸಭೆಯಲ್ಲಿ ಇಬ್ಬರೂ ನಾಯಕರು ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ಅವರ ಬೆಂಬಲಿಗರ ಪ್ರಕಾರ ಸಿದ್ದು ಮಂಡಿಸಲಿರುವ ಅಂಶಗಳು
1. ಕಾಂಗ್ರೆಸ್‌ನ 135 ಶಾಸಕರ ಪೈಕಿ 95 ಮಂದಿ ನನ್ನ ಜತೆಗಿದ್ದಾರೆ. ಎಲ್ಲರೂ ಈ ಬಗ್ಗೆ ಅಧಿಕೃತವಾಗಿ ಬೆಂಬಲ ಕೊಟ್ಟಿದ್ದಾರೆ.
2. 224 ವಿಧಾನ ಸಭಾ ಕ್ಷೇತ್ರಗಳಲ್ಲೂ ನನ್ನ ವೋಟ್ ಬ್ಯಾಂಕ್ ಇದೆ. ಈ ಬಾರಿ ಪಕ್ಷ 135 ಸ್ಥಾನ ಪಡೆಯಲು ನಾನೇ ಕಾರಣ.
3. ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಮೋದಿಯನ್ನು ಎದುರಿಸಬಲ್ಲ ನಾಯಕ ನಾನೊಬ್ಬನೇ.
4. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇನೆ. ಯಾವ ವಿವಾದದಲ್ಲೂ ಸಿಲುಕಿಲ್ಲ.
5. ನಾನು ಮುಖ್ಯಮಂತ್ರಿ ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಿಸಿಕೊಡುತ್ತೇನೆ.
6. 50-50 ಫಾರ್ಮುಲಾ ಮಾಡಿದ್ರೆ ನನಗೆ ಮೊದಲು ಅವಕಾಶ ಕೊಡಿ. ಯಾಕೆಂದರೆ, ಡಿಕೆಶಿಗಿಂತಲೂ ನಾನು ಸೀನಿಯರ್. ನಾನು ಸಿಎಂ ಆದ್ರೆ ನನ್ನ ಸಂಪುಟದಲ್ಲಿ ಡಿಕೆಶಿ ಮಂತ್ರಿ ಆಗಬಹುದು, ಡಿಸಿಎಂ ಸಹ ಆಗಬಹುದು. ಆದರೆ ನಾನು ಡಿಕೆಶಿ ಸಂಪುಟದಲ್ಲಿ ಏನೂ ಆಗಲು ಸಾಧ್ಯವಿಲ್ಲ. ಹೀಗಾಗಿ ಮೊದಲ ಅವಕಾಶ ನನಗೆ ಕೊಡಿ.
7. 2018ರಲ್ಲಿ ಜೆಡಿಎಸ್ ಜತೆಗೆ ಆದ ಒಳ ಒಪ್ಪಂದದಿಂದ ನಾವು ಸುಮಾರು 20 ಸ್ಥಾನ ಕಳೆದುಕೊಂಡೆವು. ಅದಕ್ಕೆ ಕಾರಣ ಯಾರು ಅನ್ನೋದನ್ನ ನೀವೇ ತಿಳಿದುಕೊಳ್ಳಿ ಎಂದು ಹೇಳಲು ರೆಡಿಯಾಗಿದ್ದಾರಂತೆ ಸಿದ್ದರಾಮಯ್ಯ.
ಹಾಗಿದ್ದರೆ ಡಿ.ಕೆ ಶಿವಕುಮಾರ್ ವಾದ ಏನಿರಹುದು?
1. ನಾನು ಕಳೆದ ಮೂರು ವರ್ಷದಿಂದ ಪಕ್ಷವನ್ನು ಸಂಘಟಿಸಿದ್ದೇನೆ. ಬೇರು ಮಟ್ಟದಿಂದ ಬೆಳೆಸಿದ್ದೇನೆ.
2. ಅತ್ಯಂತ ಕಷ್ಟ ಕಾಲದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ಎಲ್ಲರೂ ಜವಾಬ್ದಾರಿ ಬೇಡ ಎಂದಾಗ ಚಾಲೆಂಜ್ ಆಗಿ ಸ್ವೀಕರಿಸಿ ಕೆಲಸ ಮಾಡಿದ್ದೇನೆ.
3. ಎರಡು ವರ್ಷಗಳಿಂದ ನಾನು ನಿದ್ದೆ ಮಾಡಿಲ್ಲ. ಕಾರ್ಯಕರ್ತರನ್ನು ಸಹ ನಿದ್ದೆ ಮಾಡಲು ಬಿಟ್ಟಿಲ್ಲ.
4. ಸಿದ್ದರಾಮಯ್ಯ ಅವರಿಗೆ ಈಗಾಗಲೇ ಅವಕಾಶ ಸಿಕ್ಕಿದೆ. ಡಿಸಿಎಂ, ಮುಖ್ಯಮಂತ್ರಿಯೂ ಆಗಿದ್ದಾರೆ.
5. ಮೂರು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇನೆ. ಸಿಬಿಐ, ಇಡಿ ಭಯ ಇದ್ದರೂ ಹೋರಾಟ ಮಾಡಿದ್ದೇನೆ.
6. ಅಧ್ಯಕ್ಷರು ಸಿಎಂ ಆಗೋದು ಕಾಂಗ್ರೆಸ್‌ನಲ್ಲಿರುವ ಸಂಪ್ರದಾಯ. ಅದನ್ನು ಈ ಬಾರಿಯೂ ಪಾಲಿಸಿ.
7. ಒಂದು ವೇಳೆ 50-50 ನೀತಿ ಮಾಡುವುದಾದರೆ ಮೊದಲು ನನಗೆ ಅವಕಾಶ ಕೊಡಿ.
ಇದನ್ನೂ ಓದಿ : Karnataka Election 2023: ಸಿಎಂ ಕುರ್ಚಿಗಾಗಿ ಡಿಕೆಶಿ ಸಿಂಪತಿ ಕಾರ್ಡ್, ಸಿದ್ದು ಪವರ್ ಕಾರ್ಡ್ ಪ್ಲೇ!