Site icon Vistara News

Karnataka Election 2023: ಎಲೆಕ್ಷನ್‌ ಡ್ಯೂಟಿಯವರಿಗೆ ಬೂಸ್ಟರ್‌ ಡೋಸ್‌ ಕಡ್ಡಾಯ; ಕೋವಿಡ್‌ ಸೋಂಕಿತರಿಗೆ ವೋಟಿಂಗ್ ಟೈಂ ಫಿಕ್ಸ್‌!

covid vaccine

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ದೇಶದ ವಿವಿಧೆಡೆ ಕೋವಿಡ್‌ ಹರಡುವಿಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Karnataka Election 2023) ದಿನಾಂಕವನ್ನು ಘೋಷಣೆ ಮಾಡಿದೆ. ಚುನಾವಣೆ ಪ್ರಕ್ರಿಯೆಗಳು ಶುರುವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್‌ ಆಗಿದ್ದು, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿ ಆದೇಶಿಸಿದೆ.

ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ್ದು, ಚುನಾವಣಾ ಪ್ರಚಾರದ ಅಬ್ಬರದಲ್ಲಿ ಮೈ ಮರೆಯದಂತೆ ಎಚ್ಚರಿಕೆ ನೀಡಿದೆ. ಕೋವಿಡ್ ಹರಡದಂತೆ ಎಚ್ಚರ ವಹಿಸುವುದು ಮುಖ್ಯವಾಗಿದ್ದು, ಎಲೆಕ್ಷನ್‌ ಪ್ರಚಾರದ ವೇಳೆ ಆಯೋಜಿಸುವ ಸಭೆಗಳು, ಮೆರವಣಿಗೆ, ರೋಡ್‌ ಶೋಗೆಲ್ಲ ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಕೋವಿಡ್ ಹರಡುವಿಕೆ ಪ್ರಮಾಣ ಹೆಚ್ಚಾದಲ್ಲಿ ಆಯಾ ರಾಜಕೀಯ ಪಕ್ಷವೇ ಹೊಣೆ ಹೊರಬೇಕು.

ಕ್ವಾರಂಟೈನ್‌ ಹಾಗೂ ಕೋವಿಡ್‌ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರು ಹಾಗೂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಮತದಾನ ಮಾಡಲು ಸಮಯ ಮೀಸಲಿಡಬೇಕು. ಜತೆಗೆ ಅಂಚೆ ಮತದಾನದ ಆಯ್ಕೆಯ ಅವಕಾಶವನ್ನು ಕಲ್ಪಿಸಬಹುದಾಗಿದೆ. ಇನ್ನು ಮತದಾನ ನಡೆಯುವ ದಿನ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ವಿತರಿಸಬೇಕು. ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲ ಮತಗಟ್ಟೆಗಳ ಮುಂದೆ ಕೋವಿಡ್ ಜಾಗೃತಿ ಬಗ್ಗೆ ಪೋಸ್ಟರ್ ಅಳವಡಿಸಬೇಕು.

ಇದನ್ನೂ ಓದಿ: Karnataka Elections : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್‌ವೈ ಗೋಪಾಲಕೃಷ್ಣ; ಕಾಂಗ್ರೆಸ್‌ ಸೇರಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ!

ವೋಟ್‌ ಕೌಂಟಿಂಗ್‌ನಲ್ಲೂ ಕಂಡಿಷನ್ಸ್‌ ಅಪ್ಲೇ

ಮತದಾನದ ಬಳಿಕ ಮತ ಎಣಿಕೆ ಪ್ರಕ್ರಿಯೆಯಲ್ಲೂ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತ ಎಣಿಕೆಗೆ ಗರಿಷ್ಠ 15 ಟೇಬಲ್‌ಗಳನ್ನೇ ಹಾಕಬೇಕು. ಜತೆಗೆ ಮತ ಎಣಿಕೆ ಕೇಂದ್ರದ ಹೊರಗೆ ಸಾರ್ವಜನಿಕರು ಗುಂಪು ಗುಂಪಾಗಿ ನಿಲ್ಲುವಂತಿಲ್ಲ.

Exit mobile version