ಬೆಂಗಳೂರು: ರಾಜ್ಯದ ಜನ ಎದುರು ನೋಡುತ್ತಿದ್ದ ದಿನ- ಕ್ಷಣ ಬಂದು ಬಿಟ್ಟಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಸ್ಟಾರ್ ಪ್ರಚಾರಕರ ಅಬ್ಬರದ ರೋಡ್ ಶೋಗಳು, ಅಭ್ಯರ್ಥಿಗಳ ಬೇಡಿಕೆ- ಕಣ್ಣೀರು, ರಾಜಕೀಯ ಲೆಕ್ಕಾಚಾರ ಮತ್ತು ಒಳಸುಳಿಗಳು ಎಲ್ಲದಕ್ಕೂ ಇಂದು ಅಂತಿಮ ಶರಾ (Karnataka Election 2023) ಬೀಳಲಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ (voting) ಆರಂಭವಾಗಿದೆ. ಇಂದು ಸಂಜೆಯ ವೇಳೆಗೆ 2,613 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಸಂಗ್ರಹವಾಗಲಿದೆ. ಇಷ್ಟು ಅಭ್ಯರ್ಥಿಗಳಲ್ಲಿ 2,427 ಪುರುಷರು, 184 ಮಹಿಳೆಯರು ಹಾಗೂ ಇಬ್ಬರು ಇತರರು.
58,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿರುವ ಒಟ್ಟು ಮತದಾರರ ಸಂಖ್ಯೆ 5,30,85,566, ಇದರಲ್ಲಿ 2,66,82,156 ಪುರುಷ ಮತದಾರರು ಹಾಗೂ 2,63,98,483 ಮಹಿಳಾ ಮತದಾರರು. 4927 ಮಂದಿ ಇತರರು. ಇದರಲ್ಲಿ 47488 ಪುರುಷರು, 45897 ಮಹಿಳೆಯರು ಹಾಗೂ 1591 ಇತರೆ ಸರ್ವಿಸ್ ಮತದಾರರು ಇದ್ದಾರೆ.
15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇರುವ ಕಡೆ ಎರಡು ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ರಾಜ್ಯದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್ ಯಂತ್ರ ಬಳಕೆಯಾಗಲಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಎಡಗೈನ ತೋರುಬೆರಳಿಗೆ ಮತದಾನದ ಶಾಯಿಯನ್ನು ಮತಗಟ್ಟೆ ಅಧಿಕಾರಿಗಳು ಹಚ್ಚಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.
ಕಣದಲ್ಲಿರುವ ಪಕ್ಷಗಳ ಬಲಾಬಲ
ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷವಾರು ಅಭ್ಯರ್ಥಿಗಳ ಬಲಾಬಲ ಹೀಗಿದೆ: ಬಿಜೆಪಿ 224 ಸ್ಥಾನಗಳಿಗೆ ಅಭ್ಯರ್ಥಿ ಹಾಕಿದೆ. ಕಾಂಗ್ರೆಸ್ 223 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ವಿಧಾನ ಸಭಾ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಿದೆ. ಜೆಡಿಎಸ್ 209 ಕ್ಷೇತ್ರಗಳಲ್ಲಿ, ಎಎಪಿ 209 ಕ್ಷೇತ್ರಗಳಲ್ಲಿ, ಬಿಎಸ್ಪಿ 133 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿವೆ. ಕರ್ನಾಟಕ ರಾಷ್ಟ್ರೀಯ ಸಮಿತಿ 195 ಕಡೆ, ಉತ್ತಮ ರಾಜಕೀಯ ಪಕ್ಷ (ನಟ ಉಪೇಂದ್ರ ಪಕ್ಷ) 110 ಕಡೆ ಅಭ್ಯರ್ಥಿಗಳನ್ನು ಹಾಕಿವೆ.
ಇದನ್ನೂ ಓದಿ: Karnataka Election 2023 : ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗಿರುತ್ತದೆ ಗೊತ್ತೇ?