ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ (Voting Awareness) ಮೂಡಿಸುವ ಸಲುವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರನ್ನು ನಮ್ಮ ಬೆಂಗಳೂರು ಐಕಾನ್‌ಗಳಾಗಿ (Bengaluru Icons) ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡ ನಟ ಮಾಸ್ಟರ್ ಆನಂದ್ ಸೇರಿದಂತೆ ಐವರನ್ನು ನೇಮಕವಾಗಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಮ್ಮ ಬೆಂಗಳೂರು ಐಕಾನ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮತದಾನದ ಕುರಿತು ನಗರದ ಜನತೆಗೆ ಹುಮ್ಮಸ್ಸು ತುಂಬುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ 5 ಪ್ರಮುಖ ವ್ಯಕ್ತಿಗಳು ನಮ್ಮ ಜತೆ ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಿದರು.
ವ್ಯವಸ್ಥಿತವಾಗಿ ಮತದಾನ ಮಾಡುವ ಸಲುವಾಗಿ 10 ದಿನಗಳ ಮುಂಚಿತವಾಗಿಯೇ ಮತದಾನದ ಚೀಟಿ ಹಾಗೂ ಮತಗಟ್ಟೆಯ ಮಾಹಿತಿ ನೀಡಲಾಗುತ್ತಿದೆ. ಇಲ್ಲವೇ ವಿ.ಎಚ್.ಎ ತಂತ್ರಾಂಶದಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿದರೆ ಸಾಕು ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಹಿಂದಿನ ದಿನಗಳಲ್ಲಿ ಮತದಾನ ಮಾಡುವ ದಿನ ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸೌಲಭ್ಯಗಳು ಇರುತ್ತಿರಲಿಲ್ಲ. ಆದರೀಗ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಮತ ಚಲಾಯಿಸುವ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿರುತ್ತದೆ. ಆದ್ದರಿಂದ ಎಲ್ಲರೂ ಮತ ಚಲಾಯಿಸಿ ಎಂದು ಆಯುಕ್ತ ತುಷಾರ್ ಮನವಿ ಮಾಡಿದರು.
ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಮುಂಬರುವ ಚುನಾವಣೆಯಲ್ಲಿ ಮತದಾರರು ಉತ್ತಮ ರೀತಿಯಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದರೆ, ಮತ ಚಲಾವಣೆಯಲ್ಲಿ ಮಾತ್ರ ಶೇಕಡಾವಾರು ಸಾಕಷ್ಟು ಹಿಂದಿದ್ದಾರೆ. ಈ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಎಲ್ಲರೂ ಮತದಾನ ಮಾಡುವಂತೆ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಗದಗದಲ್ಲಿ ಕೇಶ ಮುಂಡನ ಮಾಡಿಸಿ ಆಕ್ರೋಶ, ಶಿವಮೊಗ್ಗದಲ್ಲಿ ಹೆದ್ದಾರಿ ತಡೆ
ನಮ್ಮ ಬೆಂಗಳೂರು ಐಕಾನ್ಸ್ ಯಾರ್ಯಾರು?
- ಅನುಪ್ ಶ್ರೀಧರ್, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ (ಅರ್ಜುನ ಪ್ರಶಸ್ತಿ ವಿಜೇತ)
- ಶರತ್ ಎಂ. ಗಾಯಕ್ವಾಡ್, ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು
- ಮೋಹನ್ ಕುಮಾರ್.ಎನ್, ಬುಡಕಟ್ಟು ಜನಾಂಗದ ಗಾಯಕ
- ಆನಂದ್ ಎಚ್ (ಮಾಸ್ಟರ್ ಆನಂದ್), ಕನ್ನಡ ಚಿತ್ರ ಮತ್ತು ಕಿರುತೆರೆ ಕಲಾವಿದ ಮತ್ತು ನಿರೂಪಕ
- ತೇಜಸ್ವಿನಿ ಬಾಯ್ .ವಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ (ಅರ್ಜುನ ಪ್ರಶಸ್ತಿ ವಿಜೇತ)