-ಸುರೇಶ್ ನಾಯ್ಕ, ವಿಸ್ತಾರ ನ್ಯೂಸ್, ಹಾವೇರಿ
ಉತ್ತರ ಕರ್ನಾಟಕ ಹೆಬ್ಬಾಗಿಲು, ಏಲಕ್ಕಿ ಕಂಪಿನ ಹಾವೇರಿಯಲ್ಲಿ (Haveri District election Survey) ಚುನಾವಣಾ ಕಾವು ಏರಿದೆ. 6 ಕ್ಷೇತ್ರಗಳ ಪೈಕಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಸೇರಿದಂತೆ 5 ಕ್ಷೇತ್ರಗಳು ಬಿಜೆಪಿ ಮುಷ್ಟಿಯಲ್ಲಿವೆ. 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, 2019ರಲ್ಲಿ ಹಿರೇಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರ ಗೆದ್ದು ಇಡೀ ಜಿಲ್ಲೆ ಕಮಲಮಯವಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆ ಎನಿಸಿತ್ತು. ಆ ಮೂಲಕ ಹಾವೇರಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎನಿಸಿತ್ತು. ಹಾನಗಲ್ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಗೆದ್ದು ಬೀಗಿತ್ತು (Karnataka Election 2023).
ಬಿಜೆಪಿ ಸರ್ಕಾರದ ಸಾಧನೆ, ತವರು ಜಿಲ್ಲೆಗೆ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹಲವು ಯೋಜನೆ, ಅಭಿವೃದ್ಧಿಗೆ ಹರಿದ ಅನುದಾನ, ಮೋದಿ ಅಲೆ, ತಳ ಮಟ್ಟದಲ್ಲಿ ಪ್ರಬಲವಾಗಿರುವ ಸಂಘಟನೆ ನೆಚ್ಚಿಕೊಂಡು ಬಿಜೆಪಿ ಚುನಾವಣೆ ಎದುರಿಸುವ ಉತ್ಸಾಹದಲ್ಲಿದೆ. ಕಾಂಗ್ರೆಸ್ ಕೂಡ ಸರ್ಕಾರದ ವೈಫಲ್ಯ, ಬೆಲೆಯೇರಿಕೆ, ಆಡಳಿತ ವಿರೋಧಿ ಅಲೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಕೋಟೆ ಭೇದಿಸಲು ಹೊರಟಿದೆ. ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಅಷ್ಟಾಗಿ ಇಲ್ಲದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಲ್ಲ ಕ್ಷೇತ್ರಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ.
6 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಕಂಡುಬರುತ್ತಿದೆ. ಬಿಜೆಪಿ ಭದ್ರ ಕೋಟೆಯನ್ನು ಕೈವಶಪಡಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆದಿದ್ದರೆ; ಹಾನಗಲ್, ರಾಣೇಬೆನ್ನೂರು, ಶಿಗ್ಗಾವಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ರಾಣೇಬೆನ್ನೂರಿನಲ್ಲಿ ಎನ್‌ಸಿಪಿಯಿಂದ ಅಖಾಡಕ್ಕಿಳಿದ ಆರ್ ಶಂಕರ್ ಅಬ್ಬರವೂ ಜೋರಾಗಿದೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವು ತಂದಿದ್ದಾರೆ. ಅಂತಿಮವಾಗಿ ಮತದಾರರು ಯಾವ ಅಭ್ಯರ್ಥಿಗಳಿಗೆ ತಲೆನೋವು ತಂದೊಡ್ಡಲಿದ್ದಾರೆ ಕಾದು ನೋಡಬೇಕು.
ಶಿಗ್ಗಾಂವಿ-ಸವಣೂರು: ಬಸವರಾಜ ಬೊಮ್ಮಾಯಿ ನಾಗಲೋಟ ತಡೆಯಬಲ್ಲದೇ ಕಾಂಗ್ರೆಸ್?
ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಮುಸ್ಲಿಂ ಹಾಗೂ ಲಿಂಗಾಯತರು ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬೊಮ್ಮಾಯಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಸಲ ಗೆಲುವಿಗೆ ಸಜ್ಜಾಗಿರುವ ಬೊಮ್ಮಾಯಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮತ್ತೊಮ್ಮೆ ಅಲ್ಪಸಂಖ್ಯಾತರಿಗೆ ಮಣೆ ಹಾಕಿದ್ದು, ಯಾಸೀರ್‌ಖಾನ್ ಪಠಾಣರನ್ನು ಕಣಕ್ಕಿಳಿಸಿದೆ. ಬೊಮ್ಮಾಯಿ ಅವರನ್ನು ಕಟ್ಟಿಹಾಕಲು ಕೈ ನಾಯಕರು ನಡೆಸಿದ ತಂತ್ರಗಾರಿಕೆಯೇ ಈಗ ಕಾಂಗ್ರೆಸ್ ಕೈ ಕಟ್ಟಿಹಾಕಿದೆ. ಮೊದಲು ವಿನಯ ಕುಲಕರ್ಣಿ ಹೆಸರು ಮುಂಚೂಣಿಗೆ ತಂದು, ಬಳಿಕ ಯೂಸುಫ್ ಸವಣೂರು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಸ್ಥಳೀಯರಿಂದ ತೀವ್ರ ವಿರೋದ ವ್ಯಕ್ತವಾಗುತ್ತಿದ್ದಂತೆ ಒಂದೇ ದಿನದಲ್ಲಿ ಅಭ್ಯರ್ಥಿ ಬದಲಿಸಿ ಯಾಸೀರ್‌ಖಾನ್ ಪಠಾಣಗೆ ಟಿಕೆಟ್ ನೀಡಲಾಗಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಮುನಿಸು ಇನ್ನೂ ಶಮನವಾಗಿಲ್ಲ. ಮತ್ತೊಬ್ಬ ಕೈ ಟಿಕೆಟ್ ಆಕಾಂಕ್ಷಿ ಪಂಚಮಸಾಲಿ ಸಮುದಾಯದ ಮುಖಂಡ ಶಶಿಧರ ಯಲಿಗಾರ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಎದುರಾಳಿಯ ನಿರೀಕ್ಷೆಯಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಲಭವಾಗಿ ಗೆಲ್ಲುವ ಸನ್ನಾಹದಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಸುಮ್ಮನೆ ಕೂತಿಲ್ಲ. ಅದು ತಂತ್ರ ಹೆಣೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ 83868 ಹಾಗೂ ಕಾಂಗ್ರೆಸ್‌ನ ಅಜ್ಜಂಫೀರ್ ಖಾದ್ರಿ ಅವರು 74015 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಅಂತರ- 9265 ಮತಗಳು.
ಹಿರೇಕೆರೂರು: ಬಿ.ಸಿ.ಪಾಟೀಲ್ – ಬಣಕಾರ ಮಧ್ಯೆ ಮತ್ತೊಂದು ಬಿಗ್ ಫೈಟ್
ಸಾದರ ಲಿಂಗಾಯತರೇ ನಿರ್ಣಾಯಕರಾಗಿರುವ ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ, ಚಿಹ್ನೆಗಿಂತ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ಕಳೆದ ನಾಲ್ಕು ಚುನಾವಣೆಗಳು ನಡೆದಿವೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಬಿ.ಸಿ.ಪಾಟೀಲ್, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದಾರೆ. ಈ ಸಲ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ. ಬಣಕಾರ್ ಈ ಸಲ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ವಿಶೇಷ ಎಂದರೆ, 2019ರ ಬೈಎಲೆಕ್ಷನ್ ವೇಳೆ ಬಿ ಸಿ ಪಾಟೀಲ್, ಬಣಕಾರ ಜೋಡೆತ್ತಿನಂತೆ ಇದ್ದರು! ಆದರೆ, ಈಗ ತಮ್ಮ ರಾಜಕೀಯ ಏಳಿಗೆಗಾಗಿ ಬಿಜೆಪಿ ತೊರೆದಿರುವ ಬಣಕಾರ್ ಕಾಂಗ್ರೆಸ್‌ನಲ್ಲಿದ್ದಾರೆ. ಬಿ ಸಿ ಪಾಟೀಲ್ ಅಬ್ಬರ ಪ್ರಚಾರಕ್ಕೆ ಮುಂದಾಗಿದ್ದಾರೆ, ಬಣಕಾರ್ ಸದ್ದಿಲ್ಲದೇ ಪ್ರಚಾರ ಮಾಡುತ್ತಿದ್ದಾರೆ. ನಾಲ್ಕು ಬಾರಿ ಗೆದ್ದಿರುವ ಪಾಟೀಲ್, 5ನೇ ಬಾರಿ ಗೆಲುವು ಎದುರು ನೋಡುತ್ತಿದ್ದಾರೆ. ಜೆಡಿಎಸ್‌ನಿಂದ ಜಯಣ್ಣ ಜಾವಣ್ಣನವರ ಕಣದಲ್ಲಿದ್ದರೂ, ಅಂಥ ಸ್ಪರ್ಧೆ ಏನೂ ಕಂಡು ಬರುತ್ತಿಲ್ಲ.
2019ರ ಉಪಚುನಾವಣೆ ವೇಳೆ ಬಿಜೆಪಿಯ ಬಿ ಸಿ ಪಾಟೀಲ್ 85562 ಮತ್ತು ಕಾಂಗ್ರೆಸ್‌ನ ಬಿ ಎಚ್ ಬನ್ನಿಕೋಡ್ 56495 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಅಂತರ-29067 ಮತಗಳು.
ಹಾವೇರಿ: ಕ್ಷೇತ್ರ ಮರುವಶಕ್ಕೆ ಕಾಂಗ್ರೆಸ್ ತಂತ್ರ, ಬಿಜೆಪಿಯ ಹೊಸ ಮುಖಕ್ಕೆ ಸಿಗುವುದೇ ಗೆಲುವು?
ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಮಾಜಿ ಸಚಿವ ರುದ್ರಪ್ಪಾ ಲಮಾಣಿ ಕಾಂಗ್ರೆಸ್‌ನಿಂದ ಕಣದಲ್ಲಿದ್ದರೆ, ಬಿಜೆಪಿ ಹೊಸಮುಖ ಗವಿಸಿದ್ದಪ್ಪ ದ್ಯಾಮಣ್ಣನವರಿಗೆ ಟಿಕೆಟ್ ನೀಡಿದೆ. ಹಾಲಿ ಶಾಸಕ ನೆಹರು ಓಲೇಕಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದಾರೆ. ಅವರು ಬಿಜೆಪಿಯಲ್ಲೇ ಇದ್ದರೂ ತಟಸ್ಥವಾಗಿದ್ದಾರೆ. ಬಿಜೆಪಿಯ ಕೆಲವು ಆಕಾಂಕ್ಷಿಗಳ ಅಸಮಾಧಾನವೂ ತಣ್ಣಗಾಗಿರುವುದು ಬಿಜೆಪಿ ಪಾಲಿಗೆ ಕೊಂಚ ಮಟ್ಟಿಗೆ ಸಮಾಧಾನ ತರಿಸಿದೆ. ಕಾಂಗ್ರೆಸ್‌ನಲ್ಲೂ ಬಂಡಾಯ ಶಮನವಾಗಿದೆ. ಬಂಡಾಯ ಎದ್ದಿದ್ದ ಎಂ ಎಂ ಹಿರೇಮಠ್, ಈರಪ್ಪ ಲಮಾಣಿ ಅವರು ಕೈ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಉಪತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮಾಡಿದ ಸಹಾಯವೇ ಗವಿಸಿದ್ದಪ್ಪಗೆ ಪ್ಲಸ್ ಪಾಯಿಂಟ್ ಆಗಿದೆ. ಇದೇ ಮೊದಲ ಸಲ ಬಿಜೆಪಿ ಎಸ್ಸಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಸರಳ ವ್ಯಕ್ತಿತ್ವದ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದುಕೊಂಡ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದ್ದರೆ, ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಮಲ ಪಡೆ ಕೆಲಸ ಮಾಡುತ್ತಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ನೆಹರೂ ಓಲೇಕಾರ್ ಅವರು 91721 ಮತ್ತು ಕಾಂಗ್ರೆಸ್‌ನ ರುದ್ರಪ್ಪಾ ಲಮಾಣಿ 75261 ಮತ ಪಡೆದಿದ್ದರು. ಗೆಲುವಿನ ಅಂತ 11304 ಮತಗಳು.
ಹಾನಗಲ್: ಬೈಎಲೆಕ್ಷನ್ ಸೋಲಿನ ಸೇಡಿಗೆ ಬಿಜೆಪಿ ತಂತ್ರ; ಕೇತ್ರ ಉಳಿಸಿಕೊಳ್ಳಲು ಕೈ ಪ್ರತಿತಂತ್ರ
ಮೂರ್ನಾಲ್ಕು ದಶಕಗಳ ಕಾಲ ಸಿ.ಎಂ.ಉದಾಸಿ, ಮನೋಹರ ತಹಶೀಲ್ದಾರ್ ನಡುವೆ ಕಾಳಗಕ್ಕೆ ಸಾಕ್ಷಿಯಾಗುತ್ತಿದ್ದ ಹಾನಗಲ್ಲ ಕ್ಷೇತ್ರದಲ್ಲಿ ಈಗ ಚಿತ್ರಣ ಬದಲಾಗಿದೆ. ಬಿಜೆಪಿಯ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಜಯಭೇರಿ ಬಾರಿಸಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿ ಅಭ್ಯರ್ಥಿಯಾಗಿದ್ದ ಶಿವರಾಜ ಸಜ್ಜನರ ಮತ್ತೊಮ್ಮೆ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶ್ರೀನಿವಾಸ ಮಾನೆ ಸ್ಪರ್ಧಿಸಿದ್ದಾರೆ. ಉಪಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವೇ ಬಂದು ನಿಂತರೂ ಕಾಂಗ್ರೆಸ್ ಸೋಲಿಸಲು ಸಾಧ್ಯವಾಗಿರಲಿಲ್ಲ. ಆಡಳಿತಾರೂಢ ಬಿಜೆಪಿಗೆ ಆ ಫಲಿತಾಂಶ ಇರಿಸುಮುರಿಸು ತಂದಿತ್ತು. ಉಪಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಶಿವರಾಜ ಸಜ್ಜನರಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ. ಕಾಂಗ್ರೆಸ್‌ನ ಮಾನೆ ಮತ್ತದೇ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿದ್ದ ಮನೋಹರ ತಹಶೀಲ್ದಾರ್ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಅವರ ಸ್ಪರ್ಧೆ ಕಾಂಗ್ರೆಸ್‌ಗೆ ಎಷ್ಟರಮಟ್ಟಿಗೆ ಹೊಡೆತ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
2021ರ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ 87490 ಮತ್ತು ಬಿಜೆಪಿಯ ಶಿವರಾಜ್ ಸಜ್ಜನರ್ 80117 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ- 7373 ಮತಗಳು.
ಬ್ಯಾಡಗಿ: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಭಾರೀ ಜಿದ್ದಾಜಿದ್ದಿ
ಕೆಂಪು ಮೆಣಸಿನಕಾಯಿ ಮಾರುಕಟ್ಟೆಗೆ ಹೆಸರಾಗಿರುವ ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿಯಿಂದ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಸವರಾಜ ಶಿವಣ್ಣನವರ ಕಣಕ್ಕಿಳಿದಿದ್ದಾರೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಎರಡೂ ಪಕ್ಷದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಸದ್ಯಕ್ಕೆ ತಣ್ಣಗಾಗಿದೆ. 2018ರಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ಈ ಸಲವೂ ಮತ್ತೆ ಅದೇ ಹುಮ್ಮಸ್ಸಿನಲ್ಲಿರುವ ಅವರು ಅಭಿವೃದ್ದಿ ಮಂತ್ರ ಜಪಿಸುತ್ತಿದ್ದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಾಲಿ ಶಾಸಕ ಆಗಿದ್ದರೂ 2018ರಲ್ಲಿ ಟಿಕೆಟ್ ಸಿಗದೇ ಕೂತಿದ್ದ ಬಸವರಾಜ ಶಿವಣ್ಣನವರಗೆ ಈ ಸಲ ಅವಕಾಶ ಸಿಕ್ಕಿದೆ. ಎರಡೂ ಪಕ್ಷಗಳಲ್ಲಿನ ಮೇಲ್ನೋಟಕ್ಕೆ ಭಿನ್ನಮತ ಶಮನವಾಗಿದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಪಕ್ಷಕ್ಕೆ ಗೆಲುವು ಸುಲಭವಾಗಲಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ 91721 ಮತ್ತು ಕಾಂಗ್ರೆಸ್‌ನ ಎಸ್ ಆರ್ ಪಾಟೀಲ್ 70450 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ – 21271 ಮತಗಳು.
ರಾಣಿಬೆನ್ನೂರು: ಬಹುಕೋನ ಸ್ಪರ್ಧೆಯ ಈ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ?
2018ರ ಚುನಾವಣೆ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆ ಕಂಡಿರುವ ರಾಣಿಬೆನ್ನೂರು ಕ್ಷೇತ್ರದಲ್ಲಿ ಈ ಸಲ ಬಹುಕೋನ ಸ್ಪರ್ಧೆ ಕಂಡುಬರುತ್ತಿದೆ. ಆಡಳಿತರ ವಿರೋದಿ ಅಲೆ, ಸ್ವಪಕ್ಷಿಕರ ವಿರೋಧದ ನಡುವೆಯು ಬಿಜೆಪಿಯಿಂದ ಹಾಲಿ ಶಾಸಕ ಅರುಣಕುಮಾರ್ ಪೂಜಾರ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡಗೆ ಟಿಕೆಟ್ ನೀಡಲಾಗಿದೆ. ಪರಿಣಾಮ ಪಕ್ಷದಲ್ಲಿ ಭುಗಿಲೆದ್ದಿದ್ದ ಅಸಮಾಧಾನವು ಶಮನವಾಗಿರೋದು ಕೈ ಪಡೆ ನಿಟ್ಟುಸಿರುವ ಬಿಟ್ಟಿದೆ. ಇನ್ನು 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಆರ್.ಶಂಕರ್, ಆ ನಂತರ ನಾನಾ ರಾಜಕೀಯ ಏಳು ಬೀಳುಗಳನ್ನು ಕಂಡರು. ಪ್ರಸಕ್ತ ಚುನಾವಣೆಯಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಮುಂದಾಗಿದ್ದ ಶಂಕರ್, ಕೊನೆಗಳಿಗೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ(NCP)ಯಿಂದ ಕಣಕ್ಕಿಳಿದಿದ್ದಾರೆ. ಬಿ ಎಸ್ ಯಡಿಯೂರಪ್ಪ ಅವರ ಆಪ್ತ, ಸಿಎಂ ಉದಾಸಿ ಅವರ ಶಿಷ್ಯ ಸಂತೋಷಕುಮಾರ್ ಪಾಟೀಲ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಸ್ಪರ್ದೆ ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ. ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಪರ ಕುಮಾರಸ್ವಾಮಿ ಎರಡು ಸಲ ಪ್ರಚಾರ ನಡೆಸಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಬಹುಕೋನ ಸ್ಪರ್ಧೆ ಏರ್ಪಟ್ಟಿರುವ ಈ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ ಹೊರಬಿಳುವು ಸಾಧ್ಯತೆಗಳಿವೆ.
2019ರ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯ ಅರುಣ್ ಕುಮಾರ್ 95438 ಹಾಗೂ ಕಾಂಗ್ರೆಸ್‌ನ ಕೆ ಬಿ ಕೋಳಿವಾಡ್ ಅವರು 72216 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಅಂತರ- 23222 ಮತಗಳು.
ಇದನ್ನೂ ಓದಿ: ಮಂಡ್ಯ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಜೆಡಿಎಸ್ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಕಾಳಗ; ಬಿಜೆಪಿಗೂ ಇದೆ ಅಪಾರ ನಿರೀಕ್ಷೆ