ರಾಮನಗರ: ರಾಜ್ಯದ ವರುಣ, ಕನಕಪುರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ (Karnataka Election 2023) ಕ್ಷೇತ್ರಗಳಂತೆ ರಾಮನಗರ ಕೂಡ ಚರ್ಚೆ, ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. “ರಾಮನಗರದಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಒಗ್ಗೂಡಿವೆ” ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಅವರು, “ನನ್ನನ್ನ ಸೋಲಿಸಲು ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಕೆಲವೆಡೆ ಬಿಜೆಪಿಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿಯೇ ಮತದಾರರಿಗೆ ಹೇಳುತ್ತಿದ್ದಾರೆ. ನನಗೆ ಮತ ನೀಡದಿದ್ದರೂ ಪರವಾಗಿಲ್ಲ, ಬಿಜೆಪಿಗೆ ಹಾಕಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್ ಮತಗಳ ವಿಭಜನೆ ಮಾಡಲು ಇಂತಹ ಷಡ್ಯಂತ್ರ ಮಾಡಲಾಗಿದೆ. ಮಂಡ್ಯದ ಚುನಾವಣೆ ರೀತಿ ಕುತಂತ್ರ ಮಾಡಲಾಗುತ್ತಿದೆ. ಆದರೆ, ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲ್ಲ. ಇಲ್ಲಿನ ಜನರೇ ಉತ್ತರ ಕೊಡುತ್ತಾರೆ. ಇಂತಹ ಕುತಂತ್ರಕ್ಕೆ ಬೇಸತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಅಶೋಕ್‌ಗೆ ನಿಖಿಲ್ ತಿರುಗೇಟು
“ಕನಕಪುರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ” ಎಂದು ಸಚಿವ ಆರ್.ಅಶೋಕ್ ಮಾಡಿದ ಆರೋಪಕ್ಕೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು. “ಕನಕಪುರದಲ್ಲಿ ಆರ್.ಅಶೋಕ್ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸುಮ್ಮನೆ ಕಾಟಾಚಾರಕ್ಕೆ ಬಂದು ಕನಕಪುರದಲ್ಲಿ ಅರ್ಜಿ ಹಾಕಿದ್ದಾರೆ. ಗೆಲ್ಲುತ್ತೇನೆ ಎಂಬ ವಿಶ್ವಾಸ ಇದ್ದರೆ ಕನಕಪುರದಲ್ಲಿ ಮಾತ್ರ ಸ್ಪರ್ಧಿಸಬೇಕಿತ್ತು. ಎರಡೂ ಕಡೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹೊಂದಾಣಿಕೆ ಅಲ್ಲವೇ” ಎಂದು ಪ್ರಶ್ನಿಸಿದರು. “ಕನಕಪುರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹಾಗಾಗಿ ಅವರು ಇಂತಹ ಕುತಂತ್ರ ಮಾಡುತ್ತಿದ್ದಾರೆ” ಎಂದರು.
ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಬಿಜೆಪಿಯ ನೂರಾರು ಕಾರ್ಯಕರ್ತರು ಇದೇ ವೇಳೆ ಜೆಡಿಎಸ್ ಸೇರ್ಪಡೆಯಾದರು. ರಾಮನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಆರೋಪದಿಂದ ಬೇಸತ್ತು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು.
ಇದನ್ನೂ ಓದಿ: Karnataka Election : ರಾಜ್ಯದಲ್ಲೀಗ ರಕ್ತ ರಾಜಕೀಯ; ಬಿಎಸ್‌ವೈ, ಡಿಕೆಶಿ, ಕುಮಾರಸ್ವಾಮಿ ಹೇಳಿದ ನೆತ್ತರ ಕತೆಗಳು!