ಬೆಂಗಳೂರು: ವೋಟಿಂಗ್ ಬೂತ್ ಎದುರಲ್ಲೇ ಮಾರಾಮಾರಿ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ಕಾರ್ಪೊರೇಟರ್ ಪತಿ ಕಬ್ಬಾಳ್ ಉಮೇಶ್ ಎಂಬವರ ಮೇಲೆ ದೂರು ನೀಡಲಾಗಿದೆ. ಈ ಘಟನೆಯ ವಿಡಿಯೋಗಳು ವೈರಲ್ ಆಗಿದ್ದು, ದೊಣ್ಣೆಗಳನ್ನು ಹಿಡಿದ ಕೆಲವು ಮಾದಕ ವ್ಯಸನಿ ಯುವಕರು ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪಾಪಯ್ಯ ಗಾರ್ಡನ್‌ನ ಗಣೇಶ ಮಂದಿರ ವಾರ್ಡ್ ಬೂತ್ ನಂಬರ್ 28-29-30-31ರ ಮುಂಭಾಗದಲ್ಲಿ ಈ ಚಕಮಕಿ ನಡೆದಿದೆ. ಮೀನಮ್ಮ ಮತ್ತು ಚೆನ್ನಪ್ಪ ಎಂಬವರು ಈ ಕುರಿತು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಡಿಯೋದಲ್ಲಿ ಕೆಲವು ಯುವಕರು ದೊಣ್ಣೆ ಹಿಡಿದು ಥಳಿಸುತ್ತಿರುವುದು, ಹೂಕುಂಡಗಳನ್ನು ನೆಲಕ್ಕೆಸೆದು ಪುಡಿ ಮಾಡುತ್ತಿರುವುದು ಕಂಡುಬಂದಿದೆ.
ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಎಂಬವರ ಪತಿಯಾದ ಕಬ್ಬಾಳ್ ಉಮೇಶ್ ಎಂಬಾತ, ಸುಮಾರು 30ರಷ್ಟು ಯುವಕರನ್ನು ಸ್ಥಳದಲ್ಲಿ ಸೇರಿಸಿ, ಕಾಂಗ್ರೆಸ್ ಬೆಂಬಲಿಗರ ಮೇಲೆ ಹಲ್ಲೆ ನಡೆಸಲು ಪ್ರೇರೇಪಿಸಿದ್ದಾನೆ. ಗಾಂಜಾ ಸೇವಿಸಿ ಬಂದಿದ್ದ ಈ ಪುಂಡರು ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲೇ ಇದ್ದ ಮಹಿಳೆಯರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆ ಬೀಸಿದ್ದಾರೆ ಎಂದು ದೂರು ನೀಡಲಾಗಿದೆ.
ಇಬ್ಬರಿಂದ ಪೊಲೀಸರು ಈ ಕುರಿತು ದೂರುಗಳನ್ನು ಪಡೆದು FIR ದಾಖಲಿಸಿದ್ದಾರೆ. ಪುಂಡರು ಹಲ್ಲೆ ನಡೆಸಿರುವ ವಿಡಿಯೋ ಫೂಟೇಜ್ ಪಡೆದು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Karnataka Election 2023: ಮತದಾನಕ್ಕೆ ಮದುಮಗನಂತೆ ಬಂದ ಡಾಲಿ; ಹೇಗಿತ್ತು ನೋಡಿ ರಿಷಬ್ ಶೆಟ್ಟಿ ಶೈಲಿ