Site icon Vistara News

Karnataka Election 2023 : ಮನೆಯಿಂದಲೇ ಮತದಾನಕ್ಕೆ ಡಿಕೆಶಿ ಆಕ್ಷೇಪ; ಚು. ಆಯೋಗಕ್ಕೆ ದೂರು ನೀಡಲು ನಿರ್ಧಾರ

d k shivakumar

d k shivakumar

ಬೆಂಗಳೂರು: ಚುನಾವಣಾ ಆಯೋಗವು ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 80 ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಒದಗಿಸಿರುವ ಕ್ರಮದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದರ ಸಾಧಕ ಭಾದಕಗಳ ಬಗ್ಗೆ ತೀವ್ರ ಮಾತುಕತೆ ನಡೆಯುತ್ತಿದೆ. ಹೆಚ್ಚಿನವರು ಇದೊಂದು ವಿಶೇಷ ಅವಕಾಶ ಎಂದು ಹೊಗಳುತ್ತಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಚುನಾವಣೆಯ ದುರ್ಬಳಕೆಗೆ ಹಾದಿಯಾಗಲಿದೆ ಎನ್ನುವುದು ಅವರ ಆಕ್ಷೇಪ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುವುದಾಗಿ ಹೇಳಿದ್ದಾರೆ.

ʻʻಅಂಗವಿಕಲರು, ವೃದ್ದರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ.. ಬಿಜೆಪಿ ಚುನಾವಣೆ ಆಯೋಗವನ್ನು ಬಳಸಿಕೊಂಡು ಚುನಾವಣೆ ದುರ್ಬಳಕೆಗೆ ಇದು ಸಹಕಾರಿಯಾಗಲಿದೆʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಆರೋಪಿಸಿದ್ದಾರೆ.

ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ವೃದ್ಧ ಹಾಗೂ ಅಂಗವಿಕಲರ ಮತದಾರರಿದ್ದಾರೆ. ಇವರು ಮನೆಯಲ್ಲೇ ಮತದಾನ ಮಾಡಿದರೆ ಅಕ್ರಮ ನಡೆಯುತ್ತದೆ. ತಮಗೆ ಬೇಕಾದಂತೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತದೆ.
ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಹೊಸ ಮತದಾನ ಯಂತ್ರಕ್ಕೆ ಸ್ವಾಗತ

ಕರ್ನಾಟಕದ ಚುನಾವಣೆಯಲ್ಲಿ ಹೊಸ ಇವಿಎಂ ಬಳಸುವ ವಿಚಾರವನ್ನು ಸ್ವಾಗತಿಸುತ್ತೇವೆ. ಗುಜರಾತ್‌ನಲ್ಲಿ ಬಳಸಿದ ಇವಿಎಂ ಬೇಡ ಎಂದು ಹೇಳಿದ್ದೆವು, ಪತ್ರ ಬರೆದಿದ್ದೆವು. ಈಗ ನಮ್ಮನ್ನು ‌ಕರೆದಿದ್ದಾರೆ. ಚುನಾವಣಾ ಆಯೋಗದ ಜೊತೆ ಮಾತನಾಡುತ್ತೇವೆ ಎಂದರು ಡಿ.ಕೆ. ಶಿವಕುಮಾರ್‌.

ʻʻಮೇ 10 ಕ್ಕೆ ಚುನಾವಣೆ ಘೋಷಣೆ ಆಗಿದೆ.. ಅದನ್ನು ಸ್ವಾಗತಿಸುತ್ತೇನೆ. ಮೊದಲೇ ದಿನಾಂಕ ಘೋಷಣೆ ಮಾಡಬೇಕಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಬೇಕೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡು ದಿನಾಂಕ ಘೋಷಣೆ ಮಾಡಿದ್ದಾರೆʼʼ ಎಂದು ಚುನಾವಣೆ ಘೋಷಣೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಮೇ 10 ಎನ್ನುವುದು ಭ್ರಷ್ಟಾಚಾರ ಓಡಿಸುವ ದಿನ. ಹೊಸ ದಿಕ್ಕು ಬದಲಿಸುವ ದಿನ. ಡಬಲ್‌ ಎಂಜಿನ್ ಫೇಲ್ ಆಗಿದೆ ಎಂದು ನಿರ್ಧಾರ ಮಾಡುವ ದಿನ. ಕಾಂಗ್ರೆಸ್ ಸರ್ಕಾರ ಬರುವ ದಿನ. ನಿಮ್ಮ ಭವಿಷ್ಯ ನಿರ್ಮಾಣ ಮಾಡುವ ದಿನ. ನಿಮ್ಮ ಭವಿಷ್ಯ ನೀವೇ ಪರಿವರ್ತನೆ ಮಾಡುವ ದಿನʼʼ ಎಂದು ಹೇಳಿದ ಅವರು, ಒಂದೇ ಹಂತದ ಚುನಾವಣೆ ಸ್ವಾಗತ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಮುಂದೆ ಕಾಂಗ್ರೆಸ್‌ ಸರ್ಕಾರವೇ ಬರುವುದು ಎಂದು ನಮ್ಮ ರಾಜ್ಯದ ಅಧಿಕಾರಿಗಳಿಗೆ ಗೊತ್ತಿದೆ. ಹೀಗಾಗಿ ಅಧಿಕಾರಿಗಳು ಅವರಿಗೆ ಸಪೋರ್ಟ್ ಮಾಡಲ್ಲʼʼ ಎಂದು ಹೇಳಿದರ.

ಸಿದ್ದರಾಮಯ್ಯ ಎರಡು ಕ್ಷೇತ್ರದ ಆಯ್ಕೆ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ʻʻಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಕೊನೆ ಚುನಾವಣೆ ಎನ್ನುವ ಅವರ ಅಭಿಪ್ರಾಯವನ್ನು ನಾನ್ಯಾಕೆ ಬದಲಾವಣೆ ಮಾಡಲಿ. ನೀವುಂಟು ಅವರುಂಟು. ಸಿದ್ದರಾಮಯ್ಯ ವರುಣ ಕೇಳಿದ್ರು ವರುಣ ಕ್ಷೇತ್ರ ಪಟ್ಟಿಯಲ್ಲಿ ಕೊಟ್ಟಿದ್ದೇವೆ. ಬೇರೆ ಯಾವ ವಿಚಾರವೂ ಚರ್ಚೆಗೆ ಬಂದಿಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

Exit mobile version