Site icon Vistara News

‌Karnataka Election 2023: ಹಲವು ಕಡೆ ಕೈಕೊಟ್ಟ ಮತಯಂತ್ರ, ತಾಳ್ಮೆಯಿಂದ ಕಾಯ್ದ ಮತದಾರ

voting machine

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (‌Karnataka Election 2023) ಮತದಾನದ ಸಂದರ್ಭದಲ್ಲಿ, ಮತದಾನ ಆರಂಭಕ್ಕೂ ಮುನ್ನವೇ ಹಲವು ಕಡೆ ಇವಿಎಂ (EVM) ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಮತದಾನಕ್ಕೆ (voting) ಅಡಚಣೆ ಉಂಟಾಯಿತು.

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಗೋಕುಲಂ ಲಯನ್ಸ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಆರಂಭದಲ್ಲೇ ಇವಿಎಂ ಕೈ ಕೊಟ್ಟಿತು. ಹೀಗಾಗಿ 45 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಬೂತ್ ಸಂಖ್ಯೆ 198 ಹಾಗೂ ಗಿಣಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 217ರಲ್ಲಿ ಇವಿಎಂ ತಾಂತ್ರಿಕ ಸಮಸ್ಯೆಯಿಂದ ಸ್ಪಂದಿಸಲಿಲ್ಲ. ಸಿಬ್ಬಂದಿ ಅದನ್ನು ಸರಿಪಡಿಸುವವರೆಗೂ ಮತದಾರರು ತಾಳ್ಮೆಯಿಂದ ಕಾಯಬೇಕಾಯಿತು.

ಗದಗ ನಗರದ ಮುನ್ಸಿಪಲ್ ಕಾಲೇಜಿನ ಮತಗಟ್ಟೆಯಲ್ಲಿ ಮತಯಂತ್ರವನ್ನು ಕತ್ತಲಿನಲ್ಲಿಟ್ಟಿರುವುದರಿಂದ ಚಿಹ್ನೆ, ಗುರುತು ಸರಿಯಾಗಿ ಕಾಣುತ್ತಿಲ್ಲ ಎಂದು ಚುನಾವಣಾ ಸಿಬ್ಬಂದಿಯ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸರಿಪಡಿಸಲಾಯಿತು.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪಟ್ಟಣದ ಮತಗಟ್ಟೆ ಸಂಖ್ಯೆ 105ಯಲ್ಲಿ ಮತಯಂತ್ರ ಕೆಟ್ಟಿದ್ದರಿಂದ, 8 ಗಂಟೆಯಾದರೂ ಮತದಾನ ಆರಂಭವಾಗಲಿಲ್ಲ. ಹಲವು ಮತದಾರರು ಮತದಾನ ಮಾಡದೇ ಮರಳಿ ಮನೆಗೆ ತೆರಳಿದರು.

ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಮತಗಟ್ಟೆ 224, 233, 234 ಮುಂತಾದ ಕಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಕ್ಯೂ ಬೆಳೆಯಿತು. ದೋಷ ಸರಿಪಡಿಸಲು ಮತಗಟ್ಟೆಗೆ ಸಿಬ್ಬಂದಿ ದೌಡಾಯಿಸಿದರು.

ರಾಯಚೂರು ಜಿಲ್ಲೆಯ ಮಸ್ಕಿ, ರಾಯಚೂರು ನಗರ ಕ್ಷೇತ್ರಗಳ ಕನಿಷ್ಠ ಮೂರು ಮತಗಟ್ಟೆಗಳಲ್ಲಿ ಇವಿಎಂ ದೋಷ ಕಾಣಿಸಿಕೊಂಡು ಮತದಾನ ಸ್ಥಗಿತಗೊಂಡಿತು. ಸುಮಾರು ಒಂದು ಗಂಟೆ ಕಾಲ ಮತದಾನದಲ್ಲಿ ವಿಳಂಬವಾಯಿತು.

ಮಂಡ್ಯ ನಗರದ ಗುತ್ತಲಿನ ಅರಕೇಶ್ವರ ನಗರದ ಬೂತ್ ನಂ 230ರಲ್ಲಿ ಮಾಕ್ ಪೊಲಿಂಗ್ ಸಿದ್ಧತೆ ವೇಳೆ ಇವಿಎಂ ಮಿಷನ್ ಕೈಕೊಟ್ಟು, ಬಳಿಕ ತಾಂತ್ರಿಕ ವರ್ಗದಿಂದ ಪರಿಶೀಲನೆ ನಡೆಸಿ ಸರಿಪಡಿಸಲಾಯಿತು.

ಕಾರ್ಕಳ ತಾಲೂಕಿನ ಈದುವಿನಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿ ಆರಂಭವಾಯಿತು.

ಇದನ್ನೂ ಓದಿ: ‌Karnataka Election 2023: ಉತ್ತಮ ಮತದಾನ ದಾಖಲೆ, ಮೊದಲ 2 ಗಂಟೆಯಲ್ಲಿ ಶೇ.7 ದಾಟಿದ ವೋಟಿಂಗ್

Exit mobile version