ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್ ಶೆಟ್ಟಿ ಗಂಟಿಹೊಳೆ ಗುರುವಾರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಕಾಲಿಗೆ ಚಪ್ಪಲಿಯನ್ನೇ ಧರಿಸದ ಹಾಗೂ ಅತ್ಯಂತ ಸರಳ ವ್ಯಕ್ತಿತ್ವದಿಂದಾಗಿ ಎಲ್ಲರ ಗಮನ ಸೆಳೆದಿರುವ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು, ಎರಡನೇ ಪಟ್ಟಿಯಲ್ಲಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು.
ಗುರುವಾರ ಬೆಳಗ್ಗೆ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಪಕ್ಷ ಟಿಕೆಟ್ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರ ಆಶೀರ್ವಾದ ಕೋರಿದರು. ಹರ್ಷಚಿತ್ತರಾಗಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಬರಮಾಡಿಕೊಂಡ ಯಡಿಯೂರಪ್ಪ, ʻʻಧೈರ್ಯವಾಗಿ ಚುನಾವಣೆ ಎದುರಿಸಿ, ಗೆದ್ದು ಬನ್ನಿʼʼ ಎಂದು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪರ ಪುತ್ರ, ಬಿಜೆಪಿಯ ಉಪಾಧ್ಯಕ್ಷ ಬಿ ವೈ ವಿಜೇಂದ್ರ ಕೂಡ ಇದ್ದರು.
ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿದ್ದ ನಿಮಗೆ ಟಿಕೆಟ್ ದೊರೆತಿರುವುದು ಖುಷಿಯ ವಿಷಯ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ಬರುವ ಬೈಂದೂರು ಕ್ಷೇತ್ರದಲ್ಲಿ ಯಡಿಯೂರಪ್ಪ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಸದ್ಯ ಯಡಿಯೂರಪ್ಪರ ಪುತ್ರ ಬಿ ವೈ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ ಸಾಕಷ್ಟು ಪರಿಚಿತರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ 2013 ಹಾಗೂ 2018ರಲ್ಲೇ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶವಿತ್ತು. ಆದರೆ ಪಕ್ಷ ಸಂಘಟನೆಯಲ್ಲಿ ಪೂರ್ಣ ತೊಡಗಿಸಿಕೊಂಡ ನಂತರ ಟಿಕೆಟ್ ಪಡೆಯುವುದಾಗಿ ಗುರುರಾಜ್ ಅವರು ತಿಳಿಸಿದ್ದರು. ಆನಂತರದಲ್ಲಿ ಕ್ಷೇತ್ರದ ಗ್ರಾಮ ಗ್ರಾಮಗಳಲ್ಲೂ ಸಂಚರಿಸುತ್ತ ಜನರ ನಾಡಿ ಮಿಡಿತ ಅರಿತರು, ಅಲ್ಲಿನ ಯುವಕರೊಂದಿಗೆ ಬೆರೆತರು. ಎರಡೂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದರು.
ಚಪ್ಪಲಿ ಧರಿಸದೇ, ಬಿಳಿ ಪಂಚೆ ಹಾಗೂ ಬಿಳಿ ಅಂಗಿಯಲ್ಲೇ ಎಲ್ಲೆಡೆ ಸಂಚರಿಸುವ ಗುರುರಾಜ್ ಕ್ಷೇತ್ರದಾದ್ಯಂತ ʼಗುರುವಣ್ಣʼ ಎಂದೇ ಪರಿಚಿತರಾಗಿದ್ದಾರೆ. ಹಾಲಿ ಶಾಸಕರಾಗಿರುವ ಸುಕುಮಾರ ಶೆಟ್ಟಿ ಅವರನ್ನು ಬಿಟ್ಟು, ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಗುರುವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : BJP Karnataka: ಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್ ನೀಡಿದ ಬಿಜೆಪಿ: ಬೈಂದೂರಿನಿಂದ ಗುರುರಾಜ್ ಶೆಟ್ಟಿ ಗಂಟಿಹೊಳೆ