ಮೈಸೂರು: ಮೈಸೂರು ಜಿಲ್ಲೆಯಲ್ಲಿಂದು ಮೂರೂ ಪಕ್ಷಗಳ ಘಟಾನುಘಟಿ ನಾಯಕರಿಂದ ಮತಯಾಚನೆ ನಡೆಯಲಿದೆ. ಜೆಡಿಎಸ್ ಪರ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪರವಾಗಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಬಿಜೆಪಿ ಪರವಾಗಿ ಉತ್ತರ ಪ್ರದೇಶ ಡಿಸಿಎಂ ಬ್ರಿಜೇಶ್ ಪಠಾಕ್ ಪ್ರಚಾರ ಸಭೆ, ರೋಡ್ ಶೋ ನಡೆಸಲಿದ್ದಾರೆ. (Karnataka Election 2023)
ಇಂದು ದಿನವಿಡೀ ಮೈಸೂರು- ಚಾಮರಾಜನಗರದಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11.30 ಗಂಟೆಗೆ ಅರಮನೆ ನಗರಿಗೆ ಆಗಮಿಸಿ, ಸುತ್ತೂರು ಹೆಲಿಪ್ಯಾಡ್‌ಗೆ ವಿಶೇಷ ವಿಮಾನ ಮೂಲಕ ಬಂದಿಳಿಯಲಿದ್ದಾರೆ. ಬಳಿಕ ತಿ.ನರಸೀಪುರದ ಹೆಳವರಹುಂಡಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಹೆಲಿಕ್ಯಾಪ್ಟರ್‌ನಲ್ಲಿ ಹನೂರಿಗೆ ಪ್ರಯಾಣಿಸಿ ಗೌರಿಶಂಕರ ಕನ್ವೆನ್ಷನ್ ಹಾಲ್‌ನಲ್ಲಿ ಪ್ರಿಯಾಂಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಹನೂರಿನಿಂದ ಕೆ.ಆರ್.ನಗರಕ್ಕೆ ತೆರಳಿ ಕೆ.ಆರ್.ನಗರದಲ್ಲಿ ರೋಡ್ ಶೋ ಹಾಗೂ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೆ.ಆರ್ ನಗರದ ತೋಪಮ್ಮ ದೇವಸ್ಥಾನ, ಅಂಬೇಡ್ಕರ್ ಪುತ್ಥಳಿ ಮಾರ್ಗ, ಮುನ್ಸಿಪಾಲಿಟಿ ಸರ್ಕಲ್‌ವರೆಗೆ ಯಾತ್ರೆ ನಡೆಯಲಿದೆ. ಬಳಿಕ ಸಂಜೆ 7.30 ಗಂಟೆಗೆ ಮೈಸೂರಿಗೆ ಆಗಮಿಸಲಿದ್ದಾರೆ.
ದೇವೇಗೌಡರ ಸಂಚಾರ
ಅನಾರೋಗ್ಯದ ನಡುವೆಯೂ ಅಖಾಡಕ್ಕಿಳಿದಿರುವ ಜೆಡಿಎಸ್‌ನ ಹಿರಿಯ ನಾಯಕ, ಮಾಜಿ ಪಿಎಂ ದೇವೇಗೌಡರು ಮೈಸೂರು ಜಿಲ್ಲೆಯಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಪಿರಿಯಾಪಟ್ಟಣಕ್ಕೆ ತೆರಳಲಿರುವ ಮಾಜಿ ಪ್ರಧಾನಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗುತ್ತಾರೆ. ಅಭ್ಯರ್ಥಿ ಕೆ.ಮಹದೇವು ಪರ ಪ್ರಚಾರದಲ್ಲಿ, ಬಳಿಕ ಕೆ.ಆರ್.ನಗರದ ಕಾರ್ಯಕ್ರಮದಲ್ಲಿ, ಹೊಸೂರು, ಸಾಲಿಗ್ರಾಮ, ಮಿರ್ಲೆಯ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ ಮೈಸೂರಿಗೆ ಆಗಮಿಸಿ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಮರಳಲಿದ್ದಾರೆ.
ಇದನ್ನೂ ಓದಿ: Karnataka Election 2023: ಬೆಳಗಾವಿಯಲ್ಲಿ ಹಾಲಿ- ಮಾಜಿ ಸಿಎಂಗಳ ಮತಬೇಟೆ ಇಂದು