ಮಂಡ್ಯ: ಸಂಸದೆ ಸುಮಲತಾ ಆಪ್ತ ಯುವ ಮುಖಂಡ ಇಂಡವಾಳು ಸಚ್ಚಿದಾನಂದ ಅವರು ಬಿಜೆಪಿ ಪಕ್ಷದತ್ತ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) 7 ತಿಂಗಳ ಮೊದಲೇ ರಂಗೇರುವಂತಾಗಿದೆ. ಇನ್ನೊಂದೆಡೆ, ಸುಮಲತಾ ಅವರು ಬಿಜೆಪಿ ಸೇರಲು ಇದು ಮುನ್ನುಡಿಯೇ ಎಂಬ ಚರ್ಚೆ ಆರಂಭವಾಗಿದೆ.
ಇಂಡವಾಳು ಸಚ್ಚಿದಾನಂದ ನ.28ರಂದು ಬಿಜೆಪಿ ಸೇರಲಿದ್ದಾರೆ. ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬೆಂಗಳೂರಿನ ಬಿಜೆಪಿ ಕಚೇರಿಗೆ ತೆರಳಿ ಅವರು ಪಕ್ಷ ಸೇರ್ಪಡೆ ಆಗಲಿದ್ದಾರೆ. ರಾಜ್ಯ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿ ಪಕ್ಷದ ಸದಸ್ಯತ್ವ ಪಡೆಯಲಿದ್ದು, ಸಂಸದೆ ಸುಮಲತಾ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಚ್ಚಿದಾನಂದ ಈಗಾಗಲೇ ಕ್ಷೇತ್ರಾದ್ಯಂತ ಚುರುಕಿನ ಸಂಚಾರ ಕೈಗೊಂಡಿದ್ದಾರೆ.
ಸುಮಲತಾರನ್ನು ಬೆಂಬಲಿಸಿದ್ದಕ್ಕೆ ಕಾಂಗ್ರೆಸ್‌ನಿಂದ ಉಚ್ಚಾಟನೆ
ಕಳೆದ ಚುನಾವಣೆಯಲ್ಲಿ ಸುಮಲತಾರನ್ನು ಬೆಂಬಲಿಸಿದ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಉಚ್ಚಾಟನೆ ಮಾಡಿತ್ತು. ಅಂದು ನನ್ನಂತೆ ಲಕ್ಷಾಂತರ ಕಾರ್ಯಕರ್ತರು ಸುಮಲತಾರನ್ನು ಬೆಂಬಲಿಸಿದ್ದರು. ಆ ವೇಳೆ ನನ್ನ ಜತೆಗೆ ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಚಾಟಿಸಲಾಗಿತ್ತು. ಆದರೆ ನನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲರನ್ನೂ ವಾಪಸ್ ಕರೆಸಿಕೊಂಡಿದ್ದರು ಎಂದು ಸಚ್ಚಿದಾನಂದ ಹೇಳಿದರು.
ಕಳೆದ ಎರಡು ವರ್ಷಗಳಿಂದ ಯಾವುದೇ ಪಕ್ಷದಲ್ಲಿ ನಾನು ಗುರುತಿಸಿಕೊಂಡಿರಲಿಲ್ಲ. ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಪಕ್ಷವು ʻನಾಯಕರ ಪಕ್ಷವಾದರೆʼ, ಬಿಜೆಪಿಯು ʻಕಾರ್ಯಕರ್ತರ ಪಕ್ಷʼ ಆಗಿದೆ. ಬಿಜೆಪಿ ಸದಸ್ಯತ್ವ ಪಡೆದು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಬಗ್ಗೆ ಸುಮಲತಾ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತಾರೆ. ಜನವರಿ ವೇಳೆಗೆ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಭೆ ನಡೆಸಲಾಗುವುದು. ಅಂದು ಶ್ರೀರಂಗಪಟ್ಟಣದ ಜನತೆ ವಂಶ ರಾಜಕಾರಣ ತೊರೆದು ಯುವ ನಾಯಕತ್ವ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದವರು ಹೇಳಿದರು.
ಇದನ್ನೂ ಓದಿ | Voter data | ಸ್ವತಂತ್ರ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ, ಸಿಎಂ ಬೊಮ್ಮಾಯಿಯೇ ಕಿಂಗ್‌ಪಿನ್: ಪುನರುಚ್ಚಾರ