Site icon Vistara News

Karnataka Election 2023: ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಬಳಿಕ ನಾಮಪತ್ರ ಸಲ್ಲಿಕೆ

Karnataka Election 2023: Jagadish Shettar big road show in Dharwad

ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ, ಕಾಂಗ್ರೆಸ್‌ ಸೇರ್ಪಡೆಯಾಗಿ ಬಂಡಾಯದ ಕಹಳೆ ಊದಿರುವ ಜಗದೀಶ್‌ ಶೆಟ್ಟರ್‌ ಅವರು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ (Karnataka Election 2023) ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಅವರು ಬೃಹತ್‌ ಮೆರವಣಿಗೆ ನಡೆಸಿದರು. ನಾಗಶೆಟ್ಟಿ ಕೊಪ್ಪದಿಂದ ಮಹಾನಗರ ಪಾಲಿಕೆವರೆಗೆ ಮೆರವಣಿಗೆ ಸಾಗಿದ ಅವರು ಬಳಿಕ ಉಮೇದುವಾರಿಕೆ ಸಲ್ಲಿಸಿದರು. ‌

50 ಸಾವಿರ ಮತಗಳ ಅಂತರದಿಂದ ಗೆಲುವು ಎಂದ ಶೆಟ್ಟರ್‌

ಜಗದೀಶ್‌ ಶೆಟ್ಟರ್‌ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರೋಡ್‌ ಶೋ ವೇಳೆ ಅವರಿಗೆ ಸಾವಿರಾರು ಜನ ಬೆಂಬಲ ನೀಡಿದರು. ಶೆಟ್ಟರ್‌ ಅವರಿಗೆ ಪತ್ನಿ ಶಿಲ್ಪಾ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿ ಹಲವು ನಾಯಕರು ಸಾಥ್‌ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್‌, “ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಡ್‌ ಶೋ ವಿಡಿಯೊ

ಪ್ರತಿಸ್ಪರ್ಧಿ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರಿಗೆ ಆಶೀರ್ವಾದ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಶಿಷ್ಯನಿಗೆ ಗುರು ಆಶೀರ್ವಾದ ಮಾಡುವುದು ಸಹಜ. ಆದರೆ, ನನಗೆ ಜನರ ಆಶೀರ್ವಾದ” ಎಂದರು. ಇನ್ನು ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, “ನನ್ನ ಗೆಲುವು ನಿಶ್ಚಿತ. ಎಲ್ಲವನ್ನೂ ಜನರೇ ತೀರ್ಮಾನ ಮಾಡುತ್ತಾರೆ” ಎಂದರು.

ಶೆಟ್ಟರ್‌ ಕಾಲಿಗೆ ಬಿದ್ದ ಮಹೇಶ್‌ ಟೆಂಗಿನಕಾಯಿ

ನಾಮಪತ್ರ ಸಲ್ಲಿಕೆ ವೇಳೆ ಜಗದೀಶ್‌ ಶೆಟ್ಟರ್‌ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಮುಖಾಮುಖಿಯಾಗಿದ್ದು, ಇದೇ ವೇಳೆ ಟೆಂಗಿನಕಾಯಿ ಅವರು ಶೆಟ್ಟರ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಕೆ ಬಳಿಕ ಈ ಕುರಿತು ಮಾತನಾಡಿದ ಮಹೇಶ್‌, “ನಾಮಪತ್ರ ಸಲ್ಲಿಕೆಗೂ ಮೊದಲು ನನಗೆ ಗುರುವಿನ ಆಶೀರ್ವಾದ ಸಿಕ್ಕಿದೆ. ಗುರುವಿನ ಆಶೀರ್ವಾದ ಸಿಕ್ಕಿರುವುದರಿಂದ ನನ್ನ ಗೆಲುವು ನಿಶ್ಚಿತ” ಎಂದು ಹೇಳಿದರು.

ಇದನ್ನೂ ಓದಿ: BL Santhosh : ಚರೈವೇತಿ ಚರೈವೇತಿ, ಯಹೀ ತೋ ಮಂತ್ರ್‌ ಹೈ ಅಪ್ನಾ; ಶೆಟ್ಟರ್‌ ಆರೋಪಗಳಿಗೆ ಪ್ರತಿಯಾಗಿ ಬಿ.ಎಲ್‌ ಸಂತೋಷ್‌ ಹೇಳಿದ್ದೇನು?

ಶೆಟ್ಟರ್‌ ಅವರಿಂದ ಕಾಂಗ್ರೆಸ್‌ಗೆ ಲಾಭ ಎಂದ ದೇಶಪಾಂಡೆ

“ಜಗದೀಶ್‌ ಶೆಟ್ಟರ್‌ ಅವರು ಹಿರಿಯ ನಾಯಕರಾಗಿದ್ದು, ಅವರು ಲಿಂಗಾಯತ ಸಮುದಾಯದ ಪ್ರಭಾವಿ ಆಗಿದ್ದಾರೆ. ಅವರ ಮೇಲೆ ಲಿಂಗಾಯತ ಸಮುದಾಯದವರು ಇಟ್ಟಿರುವ ಗೌರವದಿಂದ ಖಂಡಿತವಾಗಿಯೂ ಕಾಂಗ್ರೆಸ್‌ಗೆ ಲಾಭವಾಗುತ್ತದೆ” ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಹುಬ್ಬಳ್ಳಿಯಲ್ಲಿ ಶೆಟ್ಟರ್‌ ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಅವರು, “ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯ ಆಗುತ್ತಿದೆ. ಬಿಜೆಪಿ ನಾಯಕರು ಬೆಳಗ್ಗೆಯಿಂದ ಸಂಜೆವರೆಗೆ ಲಿಂಗಾಯತರ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಅದು ಆಗಿಲ್ಲ. ಯಡಿಯೂರಪ್ಪ, ಲಕ್ಷ್ಮಣ್‌ ಸವದಿ ಪರಿಸ್ಥಿತಿಯೂ ಇದೇ ಆಗಿದೆ” ಎಂದು ಹೇಳಿದರು.

Exit mobile version