Site icon Vistara News

Karnataka Election 2023: ಸಾಮಾಜಿಕ ಭದ್ರತಾ ಯೋಜನೆಗಳ ಜತೆಗೆ, ಕನ್ನಡವೇ ಮೊದಲು! ಇದು ಜೆಡಿಎಸ್ ಪ್ರಣಾಳಿಕೆ

Karnataka Election 2023: JDS released its manifesto

ಬೆಂಗಳೂರು, ಕರ್ನಾಟಕ: ಜಾತ್ಯತೀತ ಜನತಾ ದಳ(ಜೆಡಿಎಸ್) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅಧಿಕಾರಕ್ಕೇರಿದರೆ ಸಾಮಾನ್ಯ ಜನರ ಬದುಕು ಬಂಗಾರವಾಗಿಸುವ ಭರವಸೆಗಳನ್ನು ನೀಡಿದೆ. 36 ಪುಟಗಳ ಈ ಪ್ರಣಾಳಿಕೆಯನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈ ವೇಳೆ, ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಪ್ರಚಾರ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್ ಹಾಜರಿದ್ದರು(Karnataka Election 2023).

ಈಗಾಗಲೇ ಪಂಚರತ್ನ ಯೋಜನೆಗಳ ಬಗ್ಗೆ ಎಚ್ ಡಿ ಕುಮಾರಸ್ವಾಮಿ ರಾಜ್ಯದ್ಯಂತ ಪ್ರವಾಸದ ವೇಳೆ ಹೇಳಿಕೊಂಡಿದ್ದರು. ಆ ಎಲ್ಲ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಸಾಮಾಜಿಕ ಭದ್ರತೆ, ಪಂಚರತ್ನ ಯೋಜನೆ, ಕೈಗಾರಿಕಾಭಿವೃದ್ಧಿ, ಸಾರಿಗೆ ಮತ್ತು ಪ್ರವಾಸೋದ್ಯಮ, ಜಲಧಾರೆ, ರಸ್ತೆ ಅಭಿವೃದ್ಧಿ ಸಂಪರ್ಕ ಸೇತುವೆಗಳು, ಇಂಧನ ವಲಯ, ಆಡಳಿತ ಸುಧಾರಣೆ, ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ಪ್ರಮುಖ ಯೋಜನೆಗಳ ಬಗ್ಗೆ ಪ್ರಣಾಳಿಕಯಲ್ಲಿ ಉಲ್ಲೇಖಿಸಲಾಗಿದೆ.

ಜೆಡಿಎಸ್ ಪ್ರಣಾಳಿಕೆ

ಜತೆಗೆ ಮಾತೃಶ್ರೀ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಪರಿಹಾರ, ರೈತಬಂಧು ಯೋಜನೆ, ಸಾರಥಿಗೆ ಸೈ ಯೋಜನೆ, ರಕ್ಷಕ ಬಂಧು ಯೋಜನೆ, ಹಿರಿ ಸಿರಿ ಯೋಜನೆ, ಚೈತನ್ಯ ಯೋಜನೆ, ಸಾರಿಗೆ ನೌಕರರ ಬೇಡಿಕೆ ಈಡೇರಿಕೆ, ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ, ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ, ಮೀಸಲಾತಿ ಗೊಂದಲ ನಿವಾರಣೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆಯಲ್ಲಿ ಜೆಡಿಎಸ್ ಭರವಸೆ ನೀಡಿದೆ.

ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಅಂಶಗಳ

  1. ಮಾತೃ ಶ್ರೀ ಮತ್ತು ಮಹಿಳಾ ಸಬಲೀಕರಣ
    • ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ
    • ವರ್ಷಕ್ಕೆ 5 ಅಡುಗೆ ಅನಿಲ‌ ಸಿಲೆಂಡರ್ ಉಚಿತ
    ‌ • ಗರ್ಭಿಣಿಯರಿಗೆ 6 ತಿಂಗಳುಗಳ‌ ಕಾಲ 6000 ರೂಪಾಯಿ ಭತ್ಯೆ
    • ವಿಧವಾ ವೇತನ 900 ರೂಪಾಯಿಂದ 2500ರೂಗೆ ಹೆಚ್ಚಳ
    • ಅಂಗನವಾಡಿ ಕಾರ್ಯೆಕರ್ತೆಯರಿಗೆ 5000 ರೂಪಾಯಿ ವೇತನ
    • ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣೆ
  2. ರೈತ ಚೇತನ
    • ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಸಹಾಯ ಧನ
    • ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2 ಸಾವಿರ ಸಹಾಯಧನ
    • ರೈತ ಯುವಕರನ್ನ ಮದುವೆಯಾಗುವ ಯುವತಿಯರಿಗೆ ₹2 ಲಕ್ಷ ಪ್ರೋತ್ಸಾಹ ಧನ
  3. ಹಿರಿಯ ನಾಗರಿಕರಿಗೆ ಸನ್ಮಾನ
    • ಹಿರಿಯ ನಾಗರಿಕ ಮಾಸಾಶನ ₹1200ರಿಂದ ₹5 ಸಾವಿರಕ್ಕೆ ಏರಿಕೆ
  4. ವಿಕಲಚೇತನರಿಗೆ ಆಸರೆ
    • ವಿಕಲಚೇತನರ ಪಿಂಚಣಿ 600 ರೂಪಾಯಿಂದ 2500 ರೂಪಾಯಿಗೆ ಹೆಚ್ಚಳ
  5. ಆರಕ್ಷಕರಿಗೆ ಅಭಯ
    • ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಳಿಗೆ ನೀಡುವ ವೇತನ, ಸೌಲಭ್ಯದಲ್ಲಿ ತಾರತಮ್ಯ
    • ಈ ತಾರತಾಮ್ಯ ಹೋಗಲಾಡಿಸಿ ನ್ಯಾಯಯುತ ವೇತನ ಸೌಲಭ್ಯ ನೀಡಿಕೆ
  6. ಕನ್ನಡವೇ ಮೊದಲು
    • ಕೇಂದ್ರ ಸರಕಾರದ ನಾಗರಿಕ ಸೇವೆಗಳಾದ ರೈಲ್ವೆ, ಬ್ಯಾಂಕಿಂಗ್, ರಾಜ್ಯದಲ್ಲಿರುವ ಕೇಂದ್ರ ಸಾರ್ವಜನಿಕ ಉದ್ಯಮಗಳು, ಕೇಂದ್ರ ಭದ್ರತಾಪಡೆ ಇನ್ನಿತರೆ ನೇಮಕದಲ್ಲಿ ಕನ್ನಡದಲ್ಲೇ ಪರೀಕ್ಷೆ ನಡೆಸಿ ಕನ್ನಡಿಗರಿಗೆ ಆದ್ಯತೆ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ
    • ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಅಗತ್ಯ ಕಾಯಿದೆ ಜಾರಿ
  7. ಶಿಕ್ಷಣವೇ ಆಧುನಿಕ ಶಕ್ತಿ
    • ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್
    • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ, ಆರ್ಥಿಕವಾಗಿ ಹಿಂದುಳಿದಿರುವ 18 ವರ್ಷ ತುಂಬಿರುವ 60,000 ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್
  8. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
    • ನ್ಯಾ.ರಾಜೇಂದ್ರ ಸಾಚರ್ ಆಯೋಗದ ವರದಿ ಶಿಫಾರಸುಗಳ ಅನುಷ್ಠಾನ ಕುರಿತು ಅಧ್ಯಯನಕ್ಕೆ ಸಮಿತಿ ಮತ್ತು ಸಮಿತಿ ವರದಿ ಆಧರಿಸಿ ಜಾರಿಗೆ ಕ್ರಮ
    • ರಾಜ್ಯದಲ್ಲಿನ ವಕ್ಫ ಆಸ್ತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಉನ್ನತ ಮಟ್ಟದ ಸಮಿತಿ ರಚನೆ ಅಗತ್ಯ ಅನುದಾನ ನೀಡಿಕೆ
    • ಅಶಕ್ತ ಪುರುಷ ಮತ್ತು ಅಬಲೆಯರ ಆಶ್ರಯಕ್ಕೆ ಸಹಾರಾ ಯೋಜನೆ ಜಾರಿ
  9. ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಏಳಿಗೆ
    • ಕೆ.ಎಸ್.ಎಫ್.ಸಿ ಪ್ರಸ್ತುತ ಶೇ.4ರಷ್ಟು ಬಡ್ಡಿ ವಿಧಿಸುತ್ತಿದ್ದು, ಇದಕ್ಕೆ ಇನ್ನಷ್ಟು ಸಬ್ಸಿಡಿ ನೀಡಿ SC-ST ಉದ್ದಿಮೆದಾರರಿಗೆ ಬಡ್ಡಿದರ ಶೇ.4ರಿಂದ ಶೇ.2ಕ್ಕೆ ಇಳಿಸುವುದು
    • SC-ST ಉದ್ದಿಮೆದಾರು/ಗುತ್ತಿಗೆದಾರರಿಗೆ ಶೇ.2 ಬಡ್ಡಿ ದರದಲ್ಲಿ 5 ಕೋಟಿ ವರೆಗೆ ಬಂಡವಾಳ ಒದಗಿಸಲಾಗುವುದು
    • ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ವಿವಿಧ ವಸತಿ ಯೋಜನೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಮನೆ ಹಂಚಿಕೆ
  10. ಆರೋಗ್ಯ ಸಂಪತ್ತು
    • ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳಾದ ಮೂಳೆಮಜ್ಜೆ ಚಿಕಿತ್ಸೆ, ಹೃದಯ, ಶ್ವಾಸಕೋಶ, ಯಕೃತ್ ಬದಲಾಯಿಸುವ ಶಸ್ತ್ರಚಿಕಿತ್ಸೆಗಳಿಗೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ.ವರೆಗಿನ ಪರಿಹಾರ
    • ಈ ಪರಿಹಾರ 24 ಗಂಟೆಗಳಲ್ಲೇ ನೀಡಲು ಕ್ರಮ
    • ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆಯಡಿಯಲ್ಲಿ ಸೇರ್ಪಡೆಯಾಗದ ಕಾಯಿಲೆಗಳಿಗೂ ಪರಿಹಾರ
    • ಜಯದೇವ ಮಾದರಿಯಲ್ಲಿ ಜಿಲ್ಲೆಗೊಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
    • ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ0ಆಧುನಿಕ ನರವಿಜ್ಞಾನ ವೈದ್ಯಕೀಯ ಸಂಸ್ಥೆ ಸ್ಥಾಪನೆ
  11. ಯುವಜನ ಸಬಲೀಕರಣ
    • ಒಂದು ವರ್ಷದ ಕೌಶಲ್ಯ ತರಬೇತಿಯಲ್ಲಿ ತೊಡಗಿಕೊಳ್ಳುವ ಯುವಕ ಹಾಗೂ ಯುವತಿಯರಿಗೆ ಮಾಸಿಕ 8000 ರೂ. ಭತ್ಯೆ
    • ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ ವಲಯಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ಯುವತಿಯರಿಗೆ ನೆರವು
    • ಕೈಗಾರಿಕೆ ಉತ್ಪನ್ನ ಘಟಕ ಸ್ಥಾಪನೆಗೆ 10 ಲಕ್ಷ ರೂ. ಸಹಾಯಧನ
    • ತರಬೇತಿ, ಸೇವೆಗಳ ವಲಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ 3 ಲಕ್ಷ ರೂ. ಸಹಾಯಧನ
    • ಸಣ್ಣ ಉದ್ಯಮವಾಗಿ ವ್ಯಾಪಾರ-ವಹಿವಾಟು ನಡೆಸುವವರಿಗೆ 2 ಲಕ್ಷ ರೂ. ಸಹಾಯಧನ
    • ಸಣ್ಣ ಉದ್ಯಮ ನಡೆಸುವ ಮಹಿಳಾ ಉದ್ಯಮಿಗಳಿಗೆ ಭದ್ರತೆ ರಹಿತ 2 ಕೋಟಿ ರೂ.ವರೆಗೆ ಬ್ಯಾಂಕುಗಳ ಮುಖೇನ ಸಾಲ
  12. ವೃತ್ತಿನಿರತ ವಕೀಲರ ಅಭ್ಯುದಯ
    ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯಿದೆ ಜಾರಿ
    ನೂತನವಾಗಿ ನೋಂದಾಯಿತ ವಕೀಲರಿಗೆ ಈಗ ನೀಡುವ ಮಾಸಿಕ ಭತ್ಯೆ 2,000ದಿಂದ 3,000 ರೂ.ಗಳಿಗೆ ಹೆಚ್ಚಳ

ಪ್ರಣಾಳಿಕೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಚಿಂತನೆ

ಭಾರತೀಯ ಇತಿಹಾಸದಲ್ಲಿ ಇಂತಹ ಸುಧೀರ್ಘ ಪ್ರಣಾಳಿಕೆ ಮಾಡಿಲ್ಲ. ದೇವೆಗೌಡರ,ಕುಮಾರಸ್ವಾಮಿ ಚಿಂತನೆಯನ್ನು ಇಲ್ಲಿ ತಂದಿದ್ದೇವೆ. ಯಾವುದೇ ಸ್ಕೀಂ ಬೇಡ ಅಂತ ಹೇಳಿದ್ರು 25 ಸಾವಿರ ಕೋಟಿ ಸಾಲ ಮನ್ನಾ ಕುಮಾರಸ್ವಾಮಿ ಮಾಡಿದ್ರು. ನಾವು ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದೇವೆ. ಯಾವುದೇ ವರ್ಗವನ್ನು ಕೈ ಬಿಟ್ಟಿಲ್ಲ . ಈ ಪ್ರಣಾಳಿಕೆ, ಪಂಚರತ್ನ ಯೋಜನೆಯ ಆಧಾರದಲ್ಲಿ ನಾವು ಜನತೆಯ ಮುಂದ ಹೋಗ್ತೀವಿ. ಇದು ಜಾರಿಗೆ ಬಂದ್ರೆ 7 ಕೋಟಿ ಜನರ ಬಾಳು ಹಸನಾಗುತ್ತದೆ. ಜನರ ಪಾದಕ್ಕೆ ಸಮರ್ಪಣೆ ಮಾಡ್ತಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

ಇದನ್ನೂ ಓದಿKarnataka Election: ಕೊಟ್ಟ ಮಾತಿನಂತೆ ನಡೆಯುವ ಏಕೈಕ ಗಂಡು ಕುಮಾರಸ್ವಾಮಿ: ಎಚ್‌.ಡಿ. ದೇವೇಗೌಡ

Exit mobile version