ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದು, ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಆರಂಭಿಸಿರುವ ಬೆನ್ನಲ್ಲೇ ತುಮಕೂರಿನಲ್ಲಿ ಗೂಂಡಾ ರಾಜಕೀಯ ಆರಂಭವಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಇಬ್ಬರು ಮುಸ್ಲಿಂ ಮುಖಂಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುರುಗೇಶ್ ನಿರಾಣಿಗೆ ನಾಮಪತ್ರ ಅಂಗೀಕಾರ
ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಮುರುಗೇಶ್ ನಿರಾಣಿಗೆ ನಾಮಪತ್ರ ಅಂಗೀಕಾರಗೊಂಡಿದೆ.
ಮುರುಗೇಶ್ ನಿರಾಣಿ ನಾಮಪತ್ರ ಸಲ್ಲಿಸುವಾಗ ತೆರಿಗೆ ಪಾವತಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಲಾಗಿತ್ತು. ಹೀಗಾಗಿ ಅವರ ನಾಮಪತ್ರ ತಿರಸ್ಕೃತಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು.
ಮಳೆಯ ಕಾರಣದಿಂದ ಅಮಿತ್ ಶಾ ರೋಡ್ ಶೋ ರದ್ದು
ದೇವನಹಳ್ಳಿಯಲ್ಲಿ ವಿಜಯಪುರದಲ್ಲಿ ಬಿಜೆಪಿಯ ನಾಯಕ, ಕೇಂದ್ರ ಸಚಿವ ಅಮಿತ್ ಶಾ ನಡೆಸಬೇಕಾಗಿದ್ದ ರೋಡ್ ಶೋ ಮಳೆಯ ಕಾರಣದಿಂದ ರದ್ದಾಗಿದೆ.
ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಅವರು ಪಕ್ಷದ ವಿವಿಧ ಸಭೆಗಳಲ್ಲಿ ಭಾಗವಹಿಸಿ, ಚುನಾವಣಾ ತಂತ್ರಗಾರಿಗೆ ರೂಪಿಸಲಿದ್ದಾರೆ.
ಸಿಎಂ ಪರ ಅವರ ಪತ್ನಿ ಪ್ರಚಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಅವರ ಪತ್ನಿ ಚನ್ನಮ್ಮ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಸವೂರು, ಮಾವೂರು, ಚಳ್ಯಾಳ ಸೇರಿದಂತೆ ವಿವಿಧ ಗ್ರಾಮದಲ್ಲಿ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಮತಯಾಚಿಸಿದ್ದಾರೆ.
ಜಮೀರ್ ನಾಮಪತ್ರ ಅಂಗೀಕಾರ
ಬೆಂಗಳೂರು ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ನಾಮಪತ್ರ ಅಂಗೀಕಾರಗೊಂಡಿದೆ.
ಅವರು ತಾಯಿ ಹೆಸರು ನಮೂದಿಸಿಲ್ಲ, ಆದಾಯ ತೆರಿಗೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ, ಶ್ರೀಲಂಕಾದಲ್ಲಿ ಇರೋ ಕ್ಯಾಸಿನೊ ವ್ಯವಹಾರದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಬಿಜೆಪಿ ದೂರಿತ್ತು. ಹೀಗಾಗಿ ನಾಮಪತ್ರ ತಿರಸ್ಕೃತವಾಗುವ ಆತಂಕ ಜಮೀರ್‌ಗಿತ್ತು.
ಕನಕಪುರದಲ್ಲಿ ಆರ್ ಅಶೋಕ್ ಪ್ರಚಾರ ಶುರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಸವಾಲೊಡ್ಡಿರುವ ಬಿಜೆಪಿ ಅಭ್ಯರ್ಥಿ, ಸಚಿವ ಆರ್ ಅಶೋಕ್ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನಿಂದ ಪ್ರಚಾರ ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆದೇವರು ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸುವುದರ ಮೂಲಕ ಅವರು ಪ್ರಚಾರ ಆರಂಭಿಸಿದ್ದಾರೆ.