ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಶೇ. 100ಕ್ಕೆ 100ರಷ್ಟು ಮತದಾನ ಆಗಬೇಕೆಂದು, ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಮೇ 10ರ ಮತದಾನ ದಿನದಂದು ವೇತನ ಸಹಿತ ರಜೆಯನ್ನೂ ನೀಡಲಾಗಿದೆ. ಆದರೆ, ಈ ರಜೆಯನ್ನು ದುರುಪಯೋಗ ಪಡಿಸಿಕೊಂಡು ಮತದಾನದ ಮಾಡದೆ ಪ್ರವಾಸಕ್ಕೆ ಹೊರಡುವವರಿಗೆ ಆಯೋಗ ಶಾಕ್ ನೀಡಿದೆ.
ಮೇ.10 ಕೆಲಸಕ್ಕೆ ರಜೆ ಇದ್ಯಾಲ್ಲ, ಕುಟುಂಬದೊಂದಿಗೆ ಒಂದು ದಿನ ಟ್ರಿಪ್‌ಗೆ ಹೋಗಿ ಬರೋಣವೆಂದು ಪ್ಲ್ಯಾನ್ ಏನಾದರೂ ಮಾಡಿಕೊಂಡಿದ್ದರೆ, ನಿಮಗೆ ನಿರಾಸೆ ಆಗುವುದಂತೂ ಖಂಡಿತ. ಯಾಕೆಂದರೆ ಅಂದು ಬಹುತೇಕ ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಲಿದೆ. ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಆಯೋಗದೊಂದಿಗೆ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಿದೆ.
ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೋಟೆಲ್ ಹಾಗೂ ರೆಸಾರ್ಟ್‍ಗಳಲ್ಲೂ ಮೇ 9ರಿಂದಲೇ ಬುಕ್ಕಿಂಗ್ ಎಲ್ಲವನ್ನು ಕ್ಯಾನ್ಸಲ್ ಮಾಡಿದೆ. ಮತದಾನಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶೇಷ ರಿಯಾಯಿತಿ ನೀಡಲು ಮುಂದಾಗಿವೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳನ್ನು ಮೇ 10ರಂದು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಈಗಾಗಲೇ ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಮತದಾನದ ದಿನದಂದು ಸರ್ಕಾರಿ ರಜೆ ಇದ್ದು, ಈ ಹಿನ್ನೆಲೆಯಲ್ಲಿ ಮತದಾನ ಮಾಡದೆ ಪ್ರವಾಸಕ್ಕೆ ಹೊರಡುತ್ತಾರೆ ಎಂಬ ಕಾರಣದಿಂದ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: Modi in Karnataka : ರಾಜ್ಯದಲ್ಲಿ ನಾಳೆ ಮೋದಿ ಪ್ರಚಾರ; ಎಲ್ಲೆಲ್ಲಿ ಹೋಗ್ತಾರೆ? ಫುಲ್ ಡಿಟೇಲ್ಸ್ ಇಲ್ಲಿದೆ
ಜತೆಗೆ ರಾಜ್ಯದ ಎಲ್ಲ ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮಾಹಿತಿ ನೀಡಿದೆ. ಮೈಸೂರು ಮೃಗಾಲಯ ಸೇರಿದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಮುಚ್ಚಿ ಸಿಬ್ಬಂದಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಸಫಾರಿಗೂ ರಜೆ ನೀಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ಕೆಲವೊಂದು ಕಡೆಗಳಲ್ಲಿ ಮತ ಹಾಕದವರಿಗೆ ಪ್ರವೇಶವಿಲ್ಲ ಎಂದೇ ಬೋರ್ಡ್ ಹಾಕಲಾಗಿತ್ತು. ಕೈ ಬೆರಳಿನ ಶಾಯಿ ಗುರುತು ನೋಡಿಯೇ ಪ್ರವಾಸಿ ತಾಣಗಳಿಗೆ ಬಿಡುವುದಾಗಿ ಕೆಲವು ಯುವಕರ ತಂಡಗಳು ತಾಕೀತು ಮಾಡಿದ್ದವು. ಕೆಲವು ಕಡೆ ಮತ ಹಾಕದೆ ಬಂದವರಿಗೆ ಒಳಗೆ ಹೋಗಲು ಬಿಡದೆ ಹಿಂದೆ ಕಳಿಸಿದ್ದರಿಂದ ಮಾರಾಮಾರಿಗಳೂ ನಡೆದಿದ್ದವು.