ಬೆಂಗಳೂರು: ರಾಜ್ಯ ಚುನಾವಣೆ (Karnataka election 2023) ಎಂದರೆ ಎಲ್ಲ ಪಕ್ಷಗಳ ಚಿನ್ಹೆಗಳ ಬಾವುಟಗಳು ರಾರಾಜಿಸುತ್ತವೆ. ಅಭ್ಯರ್ಥಿಗಳ ರ‍್ಯಾಲಿ, ಸಮಾವೇಶ ಇದ್ದರಂತೂ ಸಾವಿರಾರು ಬಾವುಟಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಇದೀಗ ಎಲ್ಲ ಪಕ್ಷಗಳ ಬಾವುಟಕ್ಕಿಂತ ಬಜರಂಗಿ ಬಾವುಟಕ್ಕೆ ಬೇಡಿಕೆ (Bajrangi flag) ಹೆಚ್ಚಾಗಿದೆ.
ಚುನಾವಣಾ ಬಹಿರಂಗ ಪ್ರಚಾರಕ್ಕೆ ಮೂರು ದಿನ ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಕೆಲವೆಡೆ ಕಿಚ್ಚು ಹೊತ್ತಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದ್ವೇಷ ಬಿತ್ತುವ ಯಾವುದೇ ಶಕ್ತಿ ಇರಲಿ, ಬಜರಂಗ ದಳವೇ ಆದರೂ ಅದನ್ನು ನಿಷೇಧ ಮಾಡಲಾಗುವುದು ಎಂದು ತಿಳಿಸಿತ್ತು. ಬಜರಂಗದಳ ಮತ್ತು ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ಭರವಸೆ ನೀಡಿತ್ತು.
ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದುಪರ ಸಂಘಟನೆ ಕಾರ್ಯಕರ್ತರು ಹನುಮನ ದೇವಾಲಯಗಳಲ್ಲಿ ಹನುಮಾನ್ ಚಾಲಿಸಾ ಪಠಿಸಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ನಡುವೆ ನಗರದಲ್ಲಿ ಎಲ್ಲ ಪಕ್ಷಗಳನ್ನೂ ಬಜರಂಗಿ ಹಿಂದಿಕ್ಕಿದ್ದಾನೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಬಾವುಟಕ್ಕಿಂತ ಬಜರಂಗಿ ಬಾವುಟಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ.
ಕಾಂಗ್ರೆಸ್ ಪ್ರಣಾಳಿಕೆ ಪರಿಣಾಮದಿಂದ ಬಾವುಟದ ಅಂಗಡಿಗಳಲ್ಲಿ ಈಗ ಬಜರಂಗಿ ಬಾವುಟದ್ದೇ ಟ್ರೆಂಡ್ ಶುರುವಾಗಿದೆ. ಅರ್ಧ ಮುಖದ ಬಜರಂಗಿ, ಹಾರುತ್ತಿರುವ ಹನುಮನ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಿಂದ ನಗರದಲ್ಲಿ ಬಜರಂಗಿ ಬಾವುಟಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಎರಡು ದಿನದ ಮೋದಿ ರೋಡ್ ಶೋನಲ್ಲೂ ಬಜರಂಗಿ ಹಾರಾಟ
ನರೇಂದ್ರ ಮೋದಿ ರೋಡ್ ಶೋ, ಕಮಲ ಪಡೆಯ ಪ್ರಚಾರದಲ್ಲೂ ಬಜರಂಗಿ ಬಾವುಟಗಳು ರಾರಾಜಿಸುತ್ತಿವೆ. ನಗರದಲ್ಲಿ ಬಗೆ ಬಗೆಯ ಬಜರಂಗಿ ಬಾವುಟಗಳ ಭರ್ಜರಿ ಮಾರಾಟ ಜೋರಾಗಿದೆ. ಬಿಜೆಪಿ ಬಾವುಟದ ಜತೆಗೆ ಬಜರಂಗಿ ಬಾವುಟಗಳನ್ನೂ ಕಾರ್ಯಕರ್ತರು ಖರೀದಿ ಮಾಡುತ್ತಿದ್ದಾರೆ. ಮೇ 8ಕ್ಕೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುತ್ತದೆ. ಹೀಗಾಗಿ ಬಜರಂಗಿ ಬಾವುಟ ಬಳಸಿ ಕಾಂಗ್ರೆಸ್‌ಗೆ ಡ್ಯಾಮೇಜ್ ಮಾಡಲು ಬಿಜೆಪಿ, ಹಿಂದುಪರ ಸಂಘಟನೆಗಳು ನಿರ್ಧಾರ ಮಾಡಿವೆ.
ಬೆಂಗಳೂರಲ್ಲಿ ಎರಡು ದಿನ ಮೋದಿ ರೋಡ್ ಶೋ ಇರುವುದರಿಂದ ಅಲ್ಲೂ ಬಜರಂಗಿ ಬಾವುಟ ಹಾರಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಹಿಂದು ಸಂಘಟನೆಗಳು, ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಇಬ್ಬರ ಗಲಾಟೆಯಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಬಾವುಟ ಮಾರಾಟಗಾರರಿಗೆ ಒಳ್ಳೆ ಬ್ಯುಸಿನೆಸ್ ಆಗುತ್ತಿದೆ.
ಇದನ್ನೂ ಓದಿ: Weather Report: ಬೆಂಗಳೂರು, ಮೈಸೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ; ಮೋದಿ ರೋಡ್ ಶೋ ಕಥೆ ಏನು?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿತ್ತು?
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ಸರಿ ನಿಷೇಧ ಹಾಗೂ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress Manifesto) ಜನರಿಗೆ ಭರವಸೆ ನೀಡಿತ್ತು.