ಅಥಣಿ, ಕರ್ನಾಟಕ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ (jagadish shettar) ಅವರನ್ನು ಸೋಲಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಹಾಗೆಯೇ, ಪಕ್ಷಕ್ಕೆ ವಿಶ್ವಾಸದ್ರೋಹ ಮಾಡಿರುವ ಲಕ್ಷ್ಮಣ್ ಸವದಿಯನ್ನು (Laxman Savadi) ಸೋಲಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಿ ಎಂದು ನೆರೆದಿದ್ದ ಜನರಿಗೆ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ (BS Yediyurappa) ಅವರು ಕರೆ ನೀಡಿದರು(Karnataka Election 2023).
ಅಥಣಿ ವಿಧಾನಸಭೆ ಕ್ಷೇತ್ರ ಬಿಜೆಪಿಯ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಪರವಾಗಿ ಪ್ರಚಾರಕ್ಕಾಗಿ ಆಗಮಿಸಿದ್ದ ಯಡಿಯೂರಪ್ಪ ಅವರು, ಶಿವಯೋಗಿ ದೇವಸ್ಥಾನದ ಮೈದಾನದಲ್ಲಿ ನಡೆದಿರುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷದಲ್ಲಿದ್ದುಕೊಂಡು ಎಲ್ಲ ಹುದ್ದೆಗಳನ್ನು, ಸೌಲಭ್ಯಗಳನ್ನು ಅನುಭವಿಸಿದ ಜಗದೀಶ್ ಶೆಟ್ಟರ್ ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅವರನ್ನು ಸೋಲಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಲಕ್ಷ್ಮಣ್ ಸವದಿಯನ್ನು ಸೋಲಿಸುವ ಹೊಣೆಯನ್ನು ನೀವು ಹೊರಬೇಕು ಎಂದು ನೆರೆದಿದ್ದ ಜನರಿಗೆ ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರು ಸುಮಾರು 25ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಲಕ್ಷ್ಮಣ್ ಸವದಿಯ ಸೋಲನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಗುಡುಗಿದರು.
ಕಾಂಗ್ರೆಸ್ ಪಕ್ಷವು ಮುಳುಗತ್ತಿರುವ ಹಡಗು. ಉತ್ತರ ಪ್ರದೇಶದಲ್ಲಿ ಕೇವಲ 4ರಿಂದ 5 ಸೀಟು ಗೆದ್ದಿದ್ದಾರೆ. ನಮ್ಮ ಪಕ್ಷದ ಜನಪ್ರಿಯ ನಾಯಕರಾದ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಮನಾಗಬಲ್ಲರೇ ಎಂದು ಯಡಿಯೂರಪ್ಪ ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಿರ್ಧಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆದು ಪೂರ್ಣ ಪ್ರಮಾಣದ ಸರ್ಕಾರ ರಚಿಸುವುದು ನಿಶ್ಚಿತ. ನಮಗೆ ದ್ರೋಹ ಮಾಡಿದ ಲಕ್ಷ್ಮಣ್ ಸವದಿ ಅವರನ್ನು ಸೋಲಿಸಬೇಕು. ವಿಧಾನ ಪರಿಷತ್ ಅವಧಿಯ ಇನ್ನೂ 5 ವರ್ಷ 2 ತಿಂಗಳು ಇದ್ದರೂ ಲಕ್ಷ್ಮಣ್ ಸವದಿ ನಮ್ಮ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: BJP Karnataka: ಬಿ.ಎಲ್. ಸಂತೋಷ್ ಹೇಳಿದಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ: ಸಭೆ ನಂತರ ಬಿ.ಎಸ್. ಯಡಿಯೂರಪ್ಪ ಮಾತು
ಅಥಣಿಯಲ್ಲಿ 10 ಸಾವಿರ ಜನರು ಈ ಉರಿ ಬಿಸಿಲಿನಲ್ಲಿ ಸೇರುತ್ತಾರೆಂಬ ನಂಬಿಕೆ ಇರಲಿಲ್ಲ. ನನ್ನ ನಂಬಿಕೆಯನ್ನು ನೀವು ಹುಸಿ ಮಾಡಿದ್ದಾರೆ. ನಿಮ್ಮ ಅಭಿಮಾನಕ್ಕೆ ಮೆಚ್ಚುಗೆ ಸಲ್ಲಿಸಲೇಬೇಕು. ಈ ಬಾರಿ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಸೋಲೋದು ಖಚಿತ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಬಾರಿ ಬಿಜೆಪಿ ಸರ್ಕಾರ ರಚಿಸಲಿದೆ. ಈ ಚುನಾವಣೆಯಲ್ಲಿ ಬಿಜೆಪಿ 130ಕ್ಕ ಅಧಿಕ ಸೀಟುಗಳನ್ನು ಗೆಲ್ಲಲಿದೆ ಎಂದು ಯಡಿಯೂರಪ್ಪ ಅವರು ಹೇಳಿದರು.