ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಎಂಟು ದಿನ ಬಾಕಿ ಇರುವಾಗಲೇ ಕಣದ ಇಂಟೆಲಿಜೆನ್ಸ್ ರಿಪೋರ್ಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆದುಕೊಂಡಿದ್ದು, ವರದಿಯ ಅಂಶಗಳು ಅವರ ಮುಖದಲ್ಲಿ ನಗು ಅರಳಿಸುವಂತಿವೆ ಎಂದು ಹೇಳಲಾಗಿದೆ.
ವಿಧಾನಸಭೆಯ 224 ಕ್ಷೇತ್ರಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ರಿಪೋರ್ಟ್ ಪಡೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಕೊಟ್ಟ ರಿಪೋರ್ಟ್‌ನಲ್ಲಿ ಬಿಜೆಪಿ 75-85 ಸ್ಥಾನ ಗೆಲ್ಲಬಹುದು ಎಂದು ಇಂಟಲಿಜೆನ್ಸ್ ವರದಿ ಹೇಳಿತ್ತು. ಆದರೆ ನಿನ್ನೆ ಸಿಕ್ಕಿದ ರಿಪೋರ್ಟ್‌ನಲ್ಲಿ ಬಿಜೆಪಿ 115ರಿಂದ 125 ಸ್ಥಾನ ಗೆಲ್ಲುತ್ತದೆ ಎಂದು ತಿಳಿಸಲಾಗಿರುವುದರಿಂದ ಸಿಎಂ ಫುಲ್ ಖುಷಿಯಾಗಿದ್ದಾರಂತೆ.
ಬಿಜೆಪಿ ಸ್ಪಷ್ಟ ಬಹುಮತ ಪಡೆಯಬಹುದು ಎಂದು ಮೊದಲ ಬಾರಿಗೆ ಇಂಟಲಿಜೆನ್ಸ್ ವರದಿ ನೀಡಿದೆ. ಪಕ್ಷ 115 ಸ್ಥಾನಗಳ ಗಡಿ ದಾಟಲು ನೆರವಾಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಅಮಿತ್ ಶಾ, ಬೊಮ್ಮಾಯಿ, ಜೆಪಿ ನಡ್ಡಾ ಅವರ ನಿರಂತರ ಪ್ರವಾಸಗಳು, ಸಮಾವೇಶ, ರೋಡ್ ಶೋಗಳು. ರಾಜ್ಯದಲ್ಲಿ ನರೇಂದ್ರ ಮೋದಿ ವರ್ಚಸ್ಸು ಸಾಕಷ್ಟು ಕೆಲಸ ಮಾಡಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ತೆಗೆದುಕೊಂಡ ಮೀಸಲಾತಿ ಕುರಿತ ನಿರ್ಧಾರ ಬಿಜೆಪಿಗೆ ಧನಾತ್ಮಕ ಪ್ರಭಾವ ಬೀರುವಂತಿದೆ. ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿರುವುದು ಯುವ ಜನತೆಯಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿದೆ. ಕರಾವಳಿ ಭಾಗದಲ್ಲಿರುವ ಬಿಜೆಪಿ ಭದ್ರನೆಲೆಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಬಂಡಾಯದಿಂದಾಗಿ ತುಸು ಸಮಸ್ಯೆಯಾಗುವಂತಿದೆ. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಉಂಟಾಗಬಹುದು. ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಮತಗಳಲ್ಲಿ ವಿಭಜನೆಯಾಗುವುದು ಸ್ವಲ್ಪ ಸಮಸ್ಯೆ ಉಂಟುಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Karnataka Election 2023: ಇಂದು ತೀರ್ಥಹಳ್ಳಿ, ಚಿಕ್ಕಮಗಳೂರು, ಹರಿಹರದಲ್ಲಿ ರಾಹುಲ್ ಗಾಂಧಿ ರೋಡ್ ಶೋ