ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋವನ್ನು ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ನಿಂತು ನೋಡಬಹುದಲ್ಲ ಎಂದು ನೀವೆನಾದರೂ ಪ್ಲ್ಯಾನ್ ಮಾಡಿಕೊಂಡರೆ ನಿಮಗೆ ನಿರಾಸೆ ಆಗುವುದು ಗ್ಯಾರಂಟಿ. ನರೇಂದ್ರ ಮೋದಿ ಮೆಗಾ ರೋಡ್ ಶೋ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಒಂದಿಷ್ಟು ಕಂಡಿಷನ್ಸ್ ಹಾಕಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನಕ್ಕೆ ಐದೇ ದಿನ ಬಾಕಿ ಇದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ದೃಷ್ಟಿಯಿಂದ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದೆ. ರಾಜ್ಯದಲ್ಲಿ ಕಮಲ ಅರಳಿಸಲು ಕೇಸರಿ ಪಡೆ ಭರ್ಜರಿ ಕಸರತ್ತು ಮಾಡುತ್ತಿದೆ. ಮತಬೇಟೆಗಾಗಿ ಪ್ರಧಾನಿ ನರೇಂದ್ರ ಮೋದಿ (Pm Modi in Karnataka) ಮೆಗಾ ರೋಡ್ ಶೋ (Road Show) ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಿಂದ ಮೂರು ದಿನ ರಾಜ್ಯ ಪ್ರವಾಸದಲ್ಲಿದ್ದು, ಬೆಂಗಳೂರಿನಲ್ಲಿಯೂ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ರೋಡ್ ಶೋ ಸಾಗುವ ಮಾರ್ಗದ ಮನೆ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸರು ಸೂಚನೆಯೊಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆ ಪ್ರಕಾರ ಮನೆಗಳ ಬಾಲ್ಕನಿ, ಟೆರೇಸ್ ಮೇಲೆ ನಿಂತು ರ‍್ಯಾಲಿಯನ್ನು ವೀಕ್ಷಣೆ ಮಾಡುವಂತಿಲ್ಲ ಸೂಚನೆ ನೀಡಲಾಗಿದೆ.
ಏನೆಲ್ಲ ಕಂಡಿಷನ್ಸ್ ಇದೆ?
- ಮೋದಿ ರ್ಯಾಲಿ ಮುಗಿಯುವವರೆಗೆ ಜನರು ಅಪಾರ್ಟ್ಮೆಂಟ್ನಿಂದ ತಮ್ಮ ವಾಹನಗಳನ್ನು ಹೊರಗೆ ತೆಗೆಯುವಂತಿಲ್ಲ.
- ಜನರು ಮನೆ ಅಥವಾ ಅಪಾರ್ಟ್ಮೆಂಟ್ನ ಬಾಲ್ಕನಿ, ಟೆರಸ್ ಮೇಲೆ ನಿಂತು ರ್ಯಾಲಿ ನೋಡುವಂತಿಲ್ಲ.
- ಕಟ್ಟಡದ ಒಳ ಮತ್ತು ಹೊರ ಹೋಗುವ ಮಾರ್ಗ ಬಂದ್ ಮಾಡಬೇಕು.
- ಅಪಾರ್ಟ್‌ಮೆಂಟ್ ಒಳಗೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು.
- ರ್ಯಾಲಿ ನೋಡ ಬಯಸುವವರು ನಿಗದಿತ ಸ್ಥಳಕ್ಕೆ ಆಗಮಿಸಿ ವೀಕ್ಷಿಸಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ದೃಷ್ಟಿಯಿಂದ ಪೊಲೀಸರ ಜತೆ ಸಹಕರಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರಿಂದ ಜೆ.ಪಿ. ನಗರ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮೋದಿ ರೋಡ್ ಶೋ ಎಫೆಕ್ಟ್ ಮರಗಳಿಗೆ ಕೊಡಲಿ ಪೆಟ್ಟು
ಮೇ 6 ಮತ್ತು 7ರಂದು ಬೆಂಗಳೂರು ನಗರದಲ್ಲಿ ನರೇಂದ್ರ ಮೋದಿ (PM Narendra Modi) ರೋಡ್ ಶೋ ನಡೆಸಲಿದ್ದು, 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೋಡಿ ಮಾಡಲು ಪ್ಲ್ಯಾನ್ ಹೊಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ.
ಇದನ್ನೂ ಓದಿ: Karnataka Election: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್
ಒಂದು ಕಡೆ ಮೋದಿ ಸಂಚಾರ ಮಾಡುವ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಬ್ಯಾರಿಕೇಡ್ ಅಳವಡಿಕೆ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆ ರಸ್ತೆ ಅಕ್ಕ ಪಕ್ಕದ ಮರಗಳ ರೆಂಬೆ- ಕೊಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ಕತ್ತರಿಸುತ್ತಿದ್ದಾರೆ. ರೋಡ್ ಶೋ ನಡೆಸುವ ಕೆಲ ರಸ್ತೆಗಳಲ್ಲಿ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಮರಗಳ ರೆಂಬೆ ಕೊಂಬೆಗಳ ತೆರವು ಮಾಡಲಾಗುತ್ತಿದೆ.