ವಿಜಯಪುರ/ಶಿವಮೊಗ್ಗ/ತುಮಕೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದೆ. ಈಗಾಗಲೇ ಚುನಾವಣಾ ಆಯೋಗವು ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಮುಂದಾಗುತ್ತಿದೆ. ಹೀಗಿರುವಾಗಲೇ ಮತದಾರ ಪ್ರಭುಗಳು ಚುನಾವಣಾ ಬಹಿಷ್ಕಾರದ ಅಸ್ತ್ರ (Boycott of voting) ಪ್ರಯೋಗಿಸುತ್ತಿದ್ದಾರೆ. ಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ವಿಜಯಪುರ, ಶಿವಮೊಗ್ಗಸೇರಿದಂತೆ ತುಮಕೂರಿನ ಕೆಲ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ.
ಪರಮೇಶ್ವರ್ ಪ್ರತಿನಿಧಿಸುವ ಕ್ಷೇತ್ರ ಸೇರಿ 13 ಗ್ರಾಮಗಳಿಂದ ಬಹಿಷ್ಕಾರ
ಮಾಜಿ ಡಿಸಿಎಂ ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಸೇರುವ ಹಳ್ಳಿಗಳ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಕಲ್ಲು ಗಣಿಗಾರಿಕೆ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯಿಸಿ ತುಮಕೂರು ತಾಲೂಕಿನ ಚಿನ್ನವಾರನಹಳ್ಳಿ ಗ್ರಾಮ ಸೇರಿ 13 ಹಳ್ಳಿಯ ಗ್ರಾಮಸ್ಥರು ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ತಮ್ಮ ಹಕ್ಕನ್ನೇ ಚಲಾಯಿಸದಿರಲು ನಿರ್ಧರಿಸಿದ್ದ ಗ್ರಾಮಸ್ಥರ ಮನವೊಲಿಸಲು ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರು. ಮತದಾನ ಬಹಿಷ್ಕರಿಸದಂತೆ ಗ್ರಾಮಸ್ಥರ ಜತೆ ಡಾ.ಜಿ.ಪರಮೇಶ್ವರ್ ಮಾತುಕತೆ ನಡೆಸಿದರು. ಈ ವೇಳೆ ತಕ್ಷಣವೇ ಗಣಿಗಾರಿಕೆಗೆ ನೀಡಿರುವ ಪರವಾನಗಿ ವಾಪಾಸ್ ಪಡೆಯುವಂತೆ ಗ್ರಾಮಸ್ಥರ ಒತ್ತಾಯಿಸಿದರು. ಬಳಿಕ ಚಿನಿವಾರನಹಳ್ಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪರಮೇಶ್ವರ್ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದರು. ಗಣಿಗಾರಿಕೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಪೋಸ್ಟರ್ ಅಂಟಿಸಿ ಮತದಾನ ಬಹಿಷ್ಕಾರ
ವಿಜಯಪುರ ನಗರದ ಶಿವಗಿರಿ ರಸ್ತೆಯ ಸೌಭಾಗ್ಯ ನಗರ ನಿವಾಸಿಗಳು ಪೋಸ್ಟರ್ ಅಂಟಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ನಗರದಲ್ಲಿ 24×7 ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಒಳಚರಂಡಿ, ಸಿಸಿ ರಸ್ತೆ ಸಮಸ್ಯೆ ಹಿನ್ನೆಲೆ ಮತದಾನ ಬಹಿಷ್ಕಾರ ಮಾಡಲಾಗುತ್ತಿದೆ ಎಂದು ಪೋಸ್ಟರ್ ಅಂಟಿಸಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು. ನಿರಂತರ ಕುಡಿಯುವ ನೀರಿನ ಸೌಲಭ್ಯವು ಕೆಲವೇ ದಿನಗಳಲ್ಲಿ ಶುರುವಾಗಲಿದೆ, ಬೀದಿ ದೀಪಗಳನ್ನು ಅಳವಡಿಸಿ ಕೊಡುತ್ತೇವೆ. ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು.
ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮತದಾನ ಬಹಿಷ್ಕಾರ
ಶಿವಮೊಗ್ಗದ ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ಅಸ್ತ್ರ ಪ್ರಯೋಗ ಮುಂದುವರಿದಿದೆ. ಶಿವಮೊಗದ ಸಾಗರ ತಾಲೂಕಿನ ಶಾನ್ ಭೋಗ್ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಅರಣ್ಯ ಇಲಾಖೆಯ ಧೋರಣೆ ಖಂಡಿಸಿ ಶಾನ್ ಭೋಗ್ ಗ್ರಾಮ ಪಂಚಾಯತ್‌ನ ಮರಾಠಿ, ಮುರಳ್ಳಿ, ಕೋಡಾನಹಳ್ಳಿ, ಹಾಳಸಸಿ, ಹಾಳಗಳಲೆ ಗ್ರಾಮಗಳ ಜನರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.
ಅರಣ್ಯ ಇಲಾಖೆಯು ಈ ಭಾಗದ ಜಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದೆ. ಪಹಣಿಯಲ್ಲಿ ಕಂದಾಯ ಗ್ರಾಮ ಎಂದು ಘೋಷಿಸದೆ ಅಭಯಾರಣ್ಯ ಎಂದು ಉಲ್ಲೇಖ ಮಾಡಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ ಇಲಾಖೆಯ ಈ ನಿರ್ಧಾರ ಸರಿಯಲ್ಲ. ಕೂಡಲೇ ಪರಿಸರ ಸೂಕ್ಷ್ಮ ಪ್ರದೇಶವೆಂಬ ಪಟ್ಟಿಯಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ.
ರಾಮನಗರದಲ್ಲೂ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ
ರಾಮನಗರ ತಾಲ್ಲೂಕಿನ ರಾಂಪುರದೊಡ್ಡಿ ಗ್ರಾಮದ ಬಳಿ ಸ್ಥಳೀಯರು ಪ್ರತಿಭಟನೆ ಮಾಡಿದರು. ರಾಂಪುರ ದೊಡ್ಡಿ, ಗೋಪಾಲಪುರ, ಇರುಳಿಗದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರಿಪಡಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Wild Animals Attack: ರೈತನನ್ನು ಬಲಿ ಪಡೆದಿದ್ದ ಕರಡಿ ಮತ್ತೆ ಪ್ರತ್ಯಕ್ಷ; ತುಮಕೂರು ಜನರಲ್ಲಿ ಮತ್ತೆ ಹೆಚ್ಚಿದ ಆತಂಕ
ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಓಡಾಡಲು ತೊಂದರೆಯಾಗುತ್ತಿದೆ. ಹಲವು ಭಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಮೂರು ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ಸರಿಪಡಿಸುವ ಭರವಸೆ ನೀಡಿದವರಿಗಷ್ಟೇ ಈ ಬಾರಿ ಮತ ಹಾಕುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.