ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿ ಹಾಗೂ ಬಿಜೆಪಿ ಲೀಗಲ್ ಟೀಂ ಸೇರಿಕೊಂಡು ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ತಿರಸ್ಕೃತ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮುಂಜಾನೆ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಚಾರ ತಿಳಿಸಿದರು. ಸಿಎಂ ಕಚೇರಿ ದುರುಪಯೋಗ ಆಗುತ್ತಿದೆ. ಸಿಎಂ ಕಚೇರಿಯ ಕಾಲ್ ರೆಕಾರ್ಡ್ ತೆಗೆಸಬೇಕು. ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸುವಂತೆ ಅಲ್ಲಿಂದ ಒತ್ತಡ ಹಾಕಲಾಗುತ್ತಿದೆ. ಆದರೆ ಬಿಜೆಪಿಯ ಅಭ್ಯರ್ಥಿಗಳ ಅರ್ಜಿ ಡಿಫಾಲ್ಟ್ ಇದ್ದಾಗಲೂ ಅದನ್ನು ಉಳಿಸುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಕರೆ ಮಾಡಿ ಹೇಳಿದ್ದಾರೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಪ್ರಭಾವ ಬೀರಿ ರಿಜೆಕ್ಟ್ ಆಗುವಂಥ ಬಿಜೆಪಿ ಅರ್ಜಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ನನ್ನ ಅರ್ಜಿಯ ತಿರಸ್ಕಾರಕ್ಕೆ ಪ್ರಯತ್ನಿಸಿದ್ದರು. ಆಧಾರಸಹಿತವಾಗಿ ನಾನು ಆರೋಪ ಮಾಡುತ್ತಿದ್ದೇನೆ. ನನ್ನ ಅಫಿಡವಿಟ್ ಕರ್ನಾಟಕದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಕನಕಪುರದಲ್ಲಿ ಅತಿ ದೊಡ್ಡ ಬಿಜೆಪಿ ಲೀಗಲ್ ಟೀಂ ಹಾಕಿದ್ದಾರೆ. ನಾನು ಯಾವುದೇ ಲೀಗಲ್ ಟೀಂ ಹಾಕಿಲ್ಲ ಎಂದರು.
ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು 40% ಕಮಿಷನ್ ಹೊಡೆದಿಲ್ಲ. ಅಭ್ಯರ್ಥಿಗಳ ಟಿಕೆಟ್ ಅರ್ಜಿಗೆ ಅಧಿಕೃತವಾಗಿ ಹಣ ಪಡೆದಿದ್ದೇವೆ. ಬಿಲ್ಡಿಂಗ್ ಫಂಡ್ ಅಂತ ಪಡೆದಿದ್ದೇವೆ. ನಿಮ್ಮ 40% ಕಮಿಷನ್‌ಗೆ ಹಲವು ಸಾಕ್ಷಿ ಸಿಕ್ಕಿವೆ. ಮಾಡಾಳ್ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದರು.
ಶೆಟ್ಟರ್ ಮೇಲೆ ಬಿಜೆಪಿ, ಆರ್‌ಎಸ್‌ಎಸ್ ನಿಗಾ ಇಟ್ಟ ವಿಚಾರದಲ್ಲಿ, ಜಗದೀಶ್ ಶೆಟ್ಟರ್ ನಮ್ಮ ನಾಯಕರು. ನಮ್ಮ ಸ್ಟಾರ್ ಪ್ರಚಾರಕರು. ಅವರ ವಿರುದ್ಧ ಯಾವ ಷಡ್ಯಂತ್ರವೂ ನಡೆಯುವುದಿಲ್ಲ. ಬಿಜೆಪಿ ಡ್ಯಾಮ್ ಈಗಾಗಲೇ ಒಡೆದು ನೀರು ಬರ್ತಾ ಇದೆ ಎಂದರು.
ಶೋಭ ಕರಂದ್ಲಾಜೆ ಅವರೂ ಸೇರಿಕೊಂಡು ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮುಗಿಸಲು ಏನು ಮಾಡುತ್ತಿದ್ದಾರೆ ಅನ್ನುವುದು ಜಗಜ್ಜಾಹಿರಾಗಿದೆ. ಸವದಿ, ಶೆಟ್ಟರ್ ಇಬ್ಬರೂ ಕೂಡ ಯಾರು ಯಾರನ್ನು ಮುಗಿಸೋಕೆ ಹೊರಟಿದ್ದಾರೆ ಅಂತ ಡಿಟೇಲಾಗಿ ಹೇಳ್ತಿದ್ದಾರೆ ಎಂದವರು ವ್ಯಂಗ್ಯವಾಡಿದರು.
ಇದೇ ವೇಳೆಗೆ ಬಿಜೆಪಿಯಿಂದ ಬಂದ ನಾಯಕರನ್ನು ಪಕ್ಷದ ಬಾವುಟ ನೀಡಿ ಡಿಕೆಶಿ ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಚಿತ್ತಾಪುರದಲ್ಲಿ 3 ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಮತ್ತು ಅರವಿಂದ್ ಚೌಹಾನ್ ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಅನೇಕರು ನಮ್ಮ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುತ್ತಿದ್ದಾರೆ. ಜಿಲ್ಲಾ ಮಟ್ಟದ ನಾಯಕರಿಗೆ ಪಕ್ಷ ಸೇರ್ಪಡೆ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದೇನೆ ಎಂದು ಡಿಕೆಶಿ ಹೇಳಿದರು. ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Election 2023: ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರ, ಇಂದು ಟೆಂಪಲ್ ರನ್