Site icon Vistara News

Karnataka Election 2023: ಇಂದು ಮತ್ತೆ ರಾಜ್ಯದಲ್ಲಿ ಮೋದಿ ಅಬ್ಬರ; ಚಿತ್ರದುರ್ಗ, ಹೊಸಪೇಟೆ, ಸಿಂಧನೂರು, ಕಲಬುರಗಿಯಲ್ಲಿ ಪ್ರಚಾರ

modi

ಬೆಂಗಳೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಮತ್ತೆ ಕರ್ನಾಟಕದಲ್ಲಿ ಹಲವು ಕಡೆ ಚುನಾವಣಾ ಪ್ರಚಾರ ಸಭೆಗಳು ಹಾಗೂ ರೋಡ್‌ ಶೋಗಳಲ್ಲಿ ಭಾಗವಹಿಸಲಿದ್ದು, ಬಿಜೆಪಿಗೆ ಶಕ್ತಿ ತುಂಬಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ಚಳ್ಳಕೆರೆ ಕ್ರಾಸ್‌ನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ, ಮಧ್ಯಾಹ್ನ 12 ಗಂಟೆಗೆ ವಿಜಯ ನಗರದ ಹೊಸಪೇಟೆಯ ಸರ್ಕಾರಿ ಮುನ್ಸಿಪಲ್‌ ಮೈದಾನದಲ್ಲಿ, ಮಧ್ಯಾಹ್ನ 2 ಗಂಟೆಗೆ ರಾಯಚೂರಿನ ಸಿಂಧನೂರಿನ ಕರಟಗಿ ರಸ್ತೆಯ ಮೈದಾನದಲ್ಲಿ ಸಮಾವೇಶ ನಡೆಯಲಿವೆ. ಸಂಜೆ 5 ಗಂಟೆಗೆ ಕಲಬುರಗಿಯ ಕೆಎಂಎಫ್‌ನಿಂದ ಸರ್ದಾರ್‌ ವಲ್ಲಭಬಾಯಿ ವೃತ್ತದವರೆಗೆ ಮೋದಿ ರೋಡ್‌ ಶೋ ನಡೆಯಲಿದೆ.

ಕೋಟೆ ನಾಡಿನಲ್ಲಿ ಮೋದಿ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ. 10.30ಕ್ಕೆ ಚಳ್ಳಕೆರೆ ಸಮೀಪದ DRDO ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ, 10.45ಕ್ಕೆ ನಗರದ ಒನಕೆ ಓಬವ್ವ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬಂದು, 11 ಗಂಟೆಗೆ ವೇದಿಕೆಗೆ ಆಗಮಿಸಲಿದ್ದಾರೆ. 11.45ಕ್ಕೆ ವೇದಿಕೆಯಿಂದ ನಿರ್ಗಮಿಸಲಿದ್ದಾರೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹತ್ತು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮೋದಿ ಮತಯಾಚನೆ ಮಾಡಲಿದ್ದಾರೆ.

ಮೋದಿ ಆಗಮನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿಗೆ ಕಡ್ಲೇಕಾಯಿ ಹಾರ, ಕಡ್ಲೇಕಾಯಿ ಪೇಟ, ಪ್ರಧಾನಿ ಮೋದಿ ತಾಯಿಗೆ ತಿಲಕ ಇಡುತ್ತಿರುವ ಫೋಟೊ, ಮದಕರಿ ನಾಯಕರ ಮೂರ್ತಿಗಳನ್ನು ಮುಖಂಡರು ಗಿಫ್ಟ್‌ ಆಗಿ ನೀಡಲಿದ್ದಾರೆ. ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಚಿತ್ರದುರ್ಗಕ್ಕೆ ಮೋದಿ ಆಗಮನದ ಹಿನ್ನಲೆಯಲ್ಲಿ ನಗರದ ಹಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಚಳ್ಳಕೆರೆ ಕ್ರಾಸ್‌ನಿಂದ ಮದಕರಿ ನಾಯಕನ ವೃತ್ತದವರೆಗೆ ವಿಐಪಿ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಚಳ್ಳಕೆರೆ, ದಾವಣಗೆರೆ, ಬೆಂಗಳೂರು, ಹೊಸಪೇಟೆ, ಬಳ್ಳಾರಿ ಕಡೆಯಿಂದ ಬರುವ ಬಸ್ ಮಾರ್ಗ ಬದಲಾವಣೆ ಮಾಡಲಾಗಿದೆ. ಐದು ಕಡೆಯಿಂದ ನಗರ ಬಸ್‌ಗಳ ಪ್ರವೇಶಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಐದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.

ಹೊಸಪೇಟೆಯಲ್ಲಿ ಮತಯಾಚನೆ

ವಿಜಯ ನಗರ: ಮಧ್ಯಾಹ್ನ 12 ಗಂಟೆಗೆ ವಿಜಯ ನಗರದ ಹೊಸಪೇಟೆಯ ಸರ್ಕಾರಿ ಮುನ್ಸಿಪಲ್‌ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಹನಗಳ ರಸ್ತೆ ಮಾರ್ಗ ಬದಲಾಯಿಸಲಾಗಿದೆ. ರೈಲ್ವೆ ನಿಲ್ದಾಣ ರಸ್ತೆ, ಪುನೀತ್ ರಾಜಕುಮಾರ್ ವೃತ್ತ, ಕಾಲೇಜ್ ರಸ್ತೆ, ಸಾಯಿಬಾಬಾ ವೃತ್ತ ಮೂಲಕ ಸಂಚರಿಸುವ ಬಸ್, ವಾಹನಗಳ ಮಾರ್ಗ ಬದಲಾಯಿಸಲಾಗಿದ್ದು, ಎಪಿಎಂಸಿ, ವಾಲ್ಮೀಕಿ ವೃತ್ತದಿಂದ ರಾಮ ಟಾಕೀಸ್ ಮೂಲಕ ಬಸ್‌ಗಳು ಬಸ್ ನಿಲ್ದಾಣ ತಲುಪಲು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಆದೇಶ ನೀಡಿದ್ದಾರೆ. ಹೊಸಪೇಟೆ ನಗರದಲ್ಲಿ ಇಂದು ಸಂಜೆ 5 ಗಂಟೆಯವರೆಗೆ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದೆ.

ಸಿಂಧನೂರಿನಲ್ಲಿ ಮಳೆ ಸೃಷ್ಟಿಸಿದ ಆತಂಕ

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿದ್ದ ಸಮಾವೇಶಕ್ಕೆ ಮಳೆ ಅಡ್ಡಿಯಿಂದಾಗಿ ಆತಂಕ ಸೃಷ್ಟಿಯಾಗಿದೆ. ವಿಪರೀತ ಮಳೆ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ‌ ಕಾರ್ಯದಲ್ಲಿ ವಿಪರೀತ ವಿಳಂಬವಾಗಿದ್ದು, ಈ ಹಿನ್ನೆಲೆಯಲ್ಲಿ ನಮೋ ಕಾರ್ಯಕ್ರಮದ ಅನುಮತಿಗೆ ಭದ್ರತಾ ದೃಷ್ಟಿಯಿಂದ ಎಸ್‌ಪಿಜಿ ಹಿಂದೇಟು ಹಾಕಿದೆ.

ಇದನ್ನೂ ಓದಿ: Karnataka Election : ನಾಳೆಯಿಂದ 2 ದಿನ ಮತ್ತೆ ಮೋದಿ ಮೋಡಿ, 62 ಕ್ಷೇತ್ರಗಳಿಗೆ ನಮೋ ಟಾರ್ಗೆಟ್‌

ಕಾರ್ಯಕ್ರಮದ ಆಯೋಜಕರ ಜೊತೆ ಸತತವಾಗಿ ಸರಣಿ ಸಭೆ ನಡೆಸಿರುವ ಎಸ್‌ಪಿಜಿ ಈವರೆಗೂ ಸಮಾವೇಶಕ್ಕೆ ಅನುಮತಿ ಕೊಟ್ಟಿಲ್ಲ. ಶೀಘ್ರವಾಗಿ ವೇದಿಕೆ ನಿರ್ಮಾಣ ‌ಮಾಡಿದರೆ ಮಾತ್ರ ಅನುಮತಿ ನೀಡುವುದಾಗಿ ಹೇಳಿದ್ದು, ಬೆಳಗ್ಗೆ 10 ಗಂಟೆಯೊಳಗೆ ನಿರ್ಮಿಸಲು ಡೆಡ್‌ಲೈನ್ ನೀಡಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ.

ಖರ್ಗೆ ಊರಿನಲ್ಲಿ ಸವಾಲು

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೋಟೆಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಸಂಜೆ ಐದು ಗಂಟೆಗೆ ಕಲಬುರಗಿ ಉತ್ತರ ಕ್ಷೇತ್ರದ ಕೆಎಂಎಫ್ ಡೈರಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ 6 ಕಿ.ಮೀ ದೂರ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದೆ. ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ರೋಡ್ ಶೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಡ್ರೋಣ್ ಕ್ಯಾಮರಾ ಹಾರಾಟ ನಿಷೇಧ ಮಾಡಲಾಗಿದೆ.

ಇದನ್ನೂ ಓದಿ: Modi in Karnataka: ಮೇ 3ಕ್ಕೆ ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಸಮಾವೇಶ; ಕುಡ್ಲದ ಆತಿಥ್ಯದಲ್ಲೇನಿದೆ?

Exit mobile version