ಬೆಂಗಳೂರು, ಕರ್ನಾಟಕ: ಬಜರಂಗದಳ ಮತ್ತು ಪಿಎಫ್ಐಗಳಂಥ ಸಮಾಜವಿರೋಧಿ ಸಂಘಟನೆಗಳ ನಿಷೇಧ ಪ್ರಣಾಳಿಕೆಯ ಭರವಸೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. 40 ಪರ್ಸೆಂಟ್ ಕಮಿಷನ್ ಆರೋಪವನ್ನು ಅಸ್ತ್ರ ಮಾಡಿಕೊಂಡಿದ್ದ ಕಾಂಗ್ರೆಸ್‌ಗೆ, ಬಜರಂಗದಳ ನಿಷೇಧ ಪ್ರಣಾಳಿಕೆಯು ಬಿಜೆಪಿಗೆ ಪ್ರತ್ಯಸ್ತ್ರ ನೀಡಿದೆ. ಈಗ ಕಾಂಗ್ರೆಸ್ (Congress) ತನ್ನ ಈ ನೀತಿಯ ಬಗ್ಗೆ ಮರುಚಿಂತಿಸುವಂತೆ ಮಾಡಿದೆ. ಅಲ್ಲದೇ, ಬಜರಂಗದಳ ನಿಷೇಧ ಪ್ರಸ್ತಾಪವನ್ನು ಪ್ರಣಾಳಿಕೆಯಿಂದ ವಾಪಸ್ ಪಡೆಯುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೆವಾಲಾ ಅವರು ಮಾತ್ರ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ(Karnataka Election 2023).
ಬಜರಂಗದಳ ನಿಷೇಧ ಭರವಸೆ ಹುಟ್ಟು ಹಾಕಿರುವ ವಿವಾದ ಕುರಿತು ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಜರಂಗದಳ ನಿಷೇಧ ಭರವಸೆಯನ್ನು ವಾಪಸ್ ಪಡೆಯುವ ಬಗ್ಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.
ಆದರೆ, ಬಜರಂಗದಳ ನಿಷೇಧ ಭರವಸೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ನಾಯಕ ರಣದೀಪ್ ಸುರ್ಜೇವಾಲಾ ಪಟ್ಟು ಹಿಡಿದರು ಎಂದು ಗೊತ್ತಾಗಿದೆ. ಈ ಕುರಿತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಸುರ್ಜೇವಾಲಾ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಆಗುವ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಆಗ್ತೀರಾ ಎಂದು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯವನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಯ ನೀಡಿದ ಸಿದ್ದು, ಡಿಕೆಶಿ
ಚುನಾವಣಾ ಅಖಾಡದಲ್ಲೀಗ ಬಜರಂಗದಳ ನಿಷೇಧ ತುಸು ಹೆಚ್ಚೇ ಸದ್ದು ಮಾಡಿದೆ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಕೊಂಚ ಭಯ ಶುರುವಾಗಿದೆ. ಬಜರಂಗದಳ ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ಭಯಪಡಬೇಡಿ. ಬಜರಂಗದಳ ಮತಗಳೇನೂ ಕಾಂಗ್ರೆಸ್‌ಗೆ ಬರಲ್ಲ. ಹಾಗಾಗಿ, ಆತಂಕವೇನೂ ಇಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ್ದಾರೆಂದು ಹೇಳಲಾಗುತ್ತಿದೆ.
ಚುನಾವಣೆಗೆ ವಾರ ಬಾಕಿ ಇರುವಾಗ ಬಿಜೆಪಿ ಹಿಂದೂ ವಿರೋಧಿ ಎಂದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದೆ. ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳು ಬಹಳ ಅಗ್ರೇಸ್ಸಿವ್ ಆಗಿ ಪ್ರಚಾರ ಮಾಡುತ್ತಿವೆ. ಇದರಿಂದ ಗೆಲವು ಸೋಲಿನ ಮೇಲೆ ಎಫೆಕ್ಟ್ ಆಗಬಹುದು ಎಂದು ಕಾಂಗ್ರೆಸ್ ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: karnataka election 2023: ಗಣಿನಗರಿ ಬಳ್ಳಾರಿಗೆ ಮೇ 5ರಂದು ಪ್ರಧಾನಿ ನರೇಂದ್ರ ಮೋದಿ, ಬೃಹತ್ ಸಮಾವೇಶ: ಸಂಸದ ಲಕ್ಷ್ಮಣ
ಬಜರಂಗದಳ ನಿಷೇಧ ಪ್ರಸ್ತಾಪ ವಾಪಸ್ ಪಡೆಯಲ್ಲ ಎಂದು ರಣದೀಪ್ ಸುರ್ಜೇವಾಲ್ ಹೇಳಿದ್ದಾರೆ. ಅವರ ಗಮನಕ್ಕೆ ಎಲ್ಲ ವಿಷಯಗಳನ್ನು ತರಲಾಗಿದೆ. ಬಜರಂಗದಳದ ಕಾರ್ಯಕರ್ತರು ಬಿಜೆಪಿ ವೋಟ್. ಆ ವೋಟ್ ಕಾಂಗ್ರೆಸ್ ಗೆ ಬರಲ್ಲ. ಇತ್ತೀಚಿನ ಭಜರಂಗದಳದ ಕಾರ್ಯಕರ್ತರ ಕಾನೂನು ಕೈಗೆತ್ತಿಕೊಂಡ ವಿಚಾರಗಳನ್ನ ಪ್ರಸ್ತಾಪ ಮಾಡಿ. ಯಾವ ಸಮುದಾಯದ ಯುವಕರು ಬಲಿ ಆಗ್ತಿದ್ದಾರೆ ಅನ್ನೋದನ್ನ ಪ್ರಚಾರದಲ್ಲಿ ಹೇಳಿ, ಪಕ್ಷದ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.