ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Election 2023) ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ, ಕೊನೆಗೆ ವರುಣ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆರ್‌ಎಸ್‌ಎಸ್ ಕೂಡ ಇನ್ನಿಲ್ಲದ ಚಟುವಟಿಕೆಯಲ್ಲಿ ತೊಡಗಿದೆ. ಇನ್ನು ಸ್ವಪಕ್ಷದಲ್ಲೇ ಕೆಲವು ವಿರೋಧಿಗಳು ಸಿದ್ದರಾಮಯ್ಯ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಯು ವರುಣದಲ್ಲಿ ಭಾರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಭಾವನಾತ್ಮಕ ಅಸ್ತ್ರವನ್ನೂ ಬಳಸಿಕೊಳ್ಳುತಿದ್ದಾರೆ.
ದೇವಾಲಯಗಳಿಗೆ ಭೇಟಿ ನೀಡುವುದು, ಕ್ಷೇತ್ರದ ಜತೆಗೆ ತಮಗೆ ಹೊಂದಿರುವ ನಂಟನ್ನು ಪುನರುಚ್ಚರಿಸುವುದು, ಸ್ಥಳೀಯವಾಗಿ ಜನರಿಗೆ ಯಾವ ಅಂಶವು ಪ್ರಮುಖ ಎನಿಸುತ್ತದೆಯೋ ಅವುಗಳ ಕುರಿತು ಹೆಚ್ಚು ಮಾತನಾಡುವುದು ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಜನರ ಮತ ಸೆಳೆಯಲು ಯತ್ನಿಸುತ್ತಿದ್ದಾರೆ.
ಪ್ರಚಾರದ ವೇಳೆ ಜನವೋ ಜನ
ಹಾಲಿ ಶಾಸಕ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರೂ ತಂದೆಗೆ ಸಾಥ್ ನೀಡುತ್ತದ್ದಾರೆ. ವರುಣ ಕ್ಷೇತ್ರವು ಸಿದ್ದರಾಮಯ್ಯ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯ ಗತಾಯ ಗೆಲುವಿಗೆ ಯತ್ನಿಸಲಾಗುತ್ತಿದೆ. ಹಾಗಾಗಿ, ಸಿದ್ದರಾಮಯ್ಯ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ನಿಮ್ಮ ಕಷ್ಟ-ಸುಖಗಳಿಗೆ ಬರುವುದು ನಾನು
ವರುಣ ಕ್ಷೇತ್ರದ ಕಾರ್ಯ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಇದೇ ವೇಳೆ ಮಾತನಾಡಿದ ಅವರು, “1978ರಿಂದ ನಾನು ವರುಣ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಕ್ಷೇತ್ರದ ಜನರ ಕಷ್ಟ-ಸುಖಗಳು ನನಗೆ ಗೊತ್ತು. ಜನರ ಕಷ್ಟಗಳಿಗೆ ನಾನು ನೆರವಾಗುತ್ತೇನೆ. ಹೊರಗಿನವರು ಬಂದು ಇಲ್ಲಿ ಮತ ಕೇಳುತ್ತಿದ್ದಾರೆ. ಆದರೆ, ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಬೇರೆ ಯಾರೂ ಬಂದು ನಿಮ್ಮ ಕಷ್ಟ ಕೇಳುವುದಿಲ್ಲ. ವರುಣ ಕ್ಷೇತ್ರದಿಂದ ಗೆದ್ದು ನಾನು ರಾಜ್ಯದ ಮುಖ್ಯಮಂತ್ರಿಯಾದೆ. ಈಗ ಮತ್ತೆ ನಾನು ನಿಮ್ಮ ಬಳಿ ಬಂದಿದ್ದೇನೆ, ಬೆಂಬಲಿಸಿ” ಎಂದು ಹೇಳಿದರು.
ಇದನ್ನೂ ಓದಿ: Karnataka Election: ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಡಿ.ಕೆ. ಶಿವಕುಮಾರ್ ತಂತ್ರ: ಸಿಎಂ ಬೊಮ್ಮಾಯಿ ಆರೋಪ
ವರುಣ ತುಂಬೆಲ್ಲ ಮುಂದಿನ ಮುಖ್ಯಮಂತ್ರಿ ಎಂಬ ಕೂಗು
ವರುಣ ಕ್ಷೇತ್ರದ ಯಾವ ಗ್ರಾಮಕ್ಕೆ ಹೋದರೂ ಸಿದ್ದರಾಮಯ್ಯ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹಾಗೆಯೇ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಕೂಗು ಕೇಳಿಬರುತ್ತಿದೆ. ಅದರಲ್ಲೂ, ಕಾರ್ಯ ಗ್ರಾಮಕ್ಕೆ ಭೇಟಿ ನೀಡಿದಾಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಜನ ಕೂಗಿದರು. ಶನಿವಾರ ಕಾರ್ಯ ಗ್ರಾಮದ ಜತೆಗೆ ಕಲ್ಕುಂದ, ಕಾರೇಪುರ, ತಗಡೂರು ಗೇಟ್ ಸೇರಿ ಹಲವು ಗ್ರಾಮಗಳಲ್ಲಿ ಸಿದ್ದರಾಮಯ್ಯ ಭಾರಿ ಮತಯಾಚಿಸಿದರು. ಸಾವಿರಾರು ಕಾರ್ಯಕರ್ತರು, ಬೆಂಬಲಿಗರು, ಮಗ ಯತೀಂದ್ರ ಸಾಥ್ ನೀಡಿದರು.