ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಅನೇಕ ಅಚ್ಚರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಹೊತ್ತು ತಂದಿದೆ. ಮುಖ್ಯವಾಗಿ, ಅನ್ಯ ಪಕ್ಷಗಳಿಂದ ಕಾಂಗ್ರೆಸ್‌ಗೆ ಆಗಮಿಸಿದವರನ್ನು ಕೈಬಿಡುವುದಿಲ್ಲ ಎಂಬ ಸಂದೇಶವನ್ನು ನೀಡಿದೆ.
ಇತ್ತೀಚೆಗಷ್ಟೆ ಬಳ್ಳಾರಿಯ ಕೂಡ್ಲಿಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಆಗಮಿಸಿದ್ದ ವಿ.ಎಸ್. ಪಾಟೀಲ್ ಅವರಿಗೆ ಯಲ್ಲಾಪುರದಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಜೆಡಿಎಸ್‌ನಿಂದ ಆಗಮಿಸಿದ್ದ ಎಸ್.ಆರ್. ಶ್ರೀನಿವಾಸ್‌ಗೆ ಅದೇ ಕ್ಷೇತ್ರ ಹಾಗೂ ಬಿಜೆಪಿಯಿಂದ ಆಗಮಿಸಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರುಗೆ ಗುರುಮಿಟ್ಕಲ್ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿಯಿಂದ ಆಗಮಿಸಿದ್ದ ಪುಟ್ಟಣ್ಣ ಅವರಿಗೆ ರಾಜಾಜಿನಗರದಿಂದ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿತ್ತು.
ಕಾಂಗ್ರೆಸ್ ಸೇರುವುದಾಗಿ ಜೆಡಿಎಸ್‌ನ ಶಿವಲಿಂಗೇಗೌಡ ತಿಳಿಸಿದ್ದು, ಅಧಿಕೃತ ಸೇರ್ಪಡೆ ಆಗಿಲ್ಲ. ಬಿಜೆಪಿಯ ಆಯನೂರು ಮಂಜುನಾಥ್ ಈಗಾಗಲೆ ಪಕ್ಷದಿಂದ ಹೊರಬಂದಿದ್ದು, ಇನ್ನಷ್ಟೆ ಕಾಂಗ್ರೆಸ್ ಸೇರಬೇಕಿದೆ. ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಘೋಷಣೆ ಮಾಡದೆ ಉಳಿಸಿಕೊಂಡಿದೆ. ವಿವಿಧ ಪಕ್ಷಗಳಿಂದ ಆಗಮಿಸುವವರು ಇನ್ನೂ ಸಾಕಷ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇನ್ನೂ ಯಾವುದೇ ಕ್ಷೇತ್ರದಿಂದ ಆಗಮಿಸುವ ಪ್ರಬಲ ಸ್ಪರ್ಧಿಗಳಿಗೆ ಟಿಕೆಟ್ ಖಚಿತ ಎಂಬ ಸಂದೇಶವನ್ನು ಪಟ್ಟಿಯಿಂದ ನೀಡಿದೆ.
ಗೋಪಾಲಯ್ಯ, ಸೋಮಶೇಖರ್ ಬಿಜೆಪಿಯಲ್ಲೇ ನೆಲೆ
ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದವರಲ್ಲಿ ಮೂವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳಿದ್ದವು. ಕೆ.ಆರ್. ಪುರ ಕ್ಷೇತ್ರದ ಭೈರತಿ ಬಸವರಾಜು, ಯಶವಂತಪುರದ ಎಸ್.ಟಿ. ಸೋಮಶೇಖರ್ ಹಾಗೂ ಮಹಾಲಕ್ಷ್ಮೀ ಲೇಔಟ್‌ನ ಕೆ. ಗೋಪಾಲಯ್ಯ ಅವರುಗಳ ಹೆಸರು ಪ್ರಮುಖವಾಗಿದ್ದವು. ಆದರೆ ಇದೀಗ ಯಶವಂತಪುರಕ್ಕೆ ಎಸ್. ಬಾಲರಾಜ್ ಗೌಡ ಹಾಗೂ ಮಹಾಲಕ್ಷ್ಮೀ ಲೇಔಟ್‌ಗೆ ಕೇಶವ ಮೂರ್ತಿ ಹೆಸರನ್ನು ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಶಾಸಕ ಕೆ. ಸಿ. ನಾರಾಯಣಗೌಡ ಅವರು ಕಾಂಗ್ರೆಸ್‌ಗೆ ತೆರಳುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ಕೆ.ಆರ್. ಪೇಟೆ ಕ್ಷೇತ್ರಕ್ಕೆ, ಜೆಡಿಎಸ್‌ನಿಂದ ಆಗಮಿಸಿದ ಬಿ.ಎಲ್. ದೇವರಾಜ ಅವರ ಹೆಸರು ಘೋಷಿಸಲಾಗಿದೆ. ಹಾಗಾಗಿ ನಾರಾಯಣ ಗೌಡರೂ ಬಿಜೆಪಿಯಲ್ಲಿ ಉಳಿಯುವುದು ಖಚಿತವಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಈಗಾಗಲೆ ಮುನಿರತ್ನ ಹೆಸರು ಘೋಷಣೆಯಾಗಿದೆ. ಹಾಗಾಗಿ ಬಿಜೆಪಿಗೆ ಆಗಮಿಸಿದ್ದ ಪ್ರಮುಖರು ಪಕ್ಷ ಬಿಡುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಕೆ.ಆರ್. ಪುರ ಟಿಕೆಟ್ ಘೋಷಣೆ ಬಾಕಿಯಿದ್ದು, ಕುತೂಹಲ ಉಳಿಸಿಕೊಂಡಿದೆ.
ಇದನ್ನೂ ಓದಿ: Karnataka Election 2023 : ಕಾಂಗ್ರೆಸ್ ಎರಡನೇ ಪಟ್ಟಿ ಪ್ರಕಟ; 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ