ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಕೋಟಿ ಕೋಟಿ ರೂಪಾಯಿಯನ್ನು ಸಾಗಣೆ ಮಾಡುತ್ತಿದ್ದಾರೆ. ಆದರೆ, ಖಾಕಿ ಹಾಗೂ ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೋಟಿ ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗುತ್ತಿದೆ.
ದಾಖಲೆಯಿಲ್ಲದೆ ಗರಿ ಗರಿ ನೋಟು ಪತ್ತೆ
ಶಿವಮೊಗ್ಗ ಜಿಲ್ಲೆಯಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿದ್ದ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸೋಮವಾರ ಒಂದೇ ದಿನ 30.64 ಲಕ್ಷ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ 27.60 ಲಕ್ಷ ರೂ., ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1.79 ಲಕ್ಷ ರೂ ಹಾಗೂ ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ 1.25 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಮಂಗಳವಾರ (ಏ.11) ಶಿವಮೊಗ್ಗದ ಕೋಟೆ ಪೊಲೀಸರು ಗಾಂಧಿ ಬಜಾರಿನ ಎಲೆ ರೇವಣ್ಣಕೇರಿಯಲ್ಲಿರುವ ಚಿನ್ನದ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ 5.83 ಕೋಟಿ ಮೌಲ್ಯದ 9.565 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಲಕ್ಷ್ಮಣ್ ಕುಮಾರ್ ಎಂಬುವರಿಗೆ ಸೇರಿದ ಸಿಲ್ವರ್ ಪ್ಯಾಲೇಸ್ ಎಂಬ ಹೆಸರಿನ ಚಿನ್ನದ ಅಂಗಡಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಸಾರಿಗೆ ಬಸ್‌ನಲ್ಲಿ ಹಣ ಸಾಗಾಟ
ವಿಜಯಪುರ ಜಿಲ್ಲೆ ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ 9.95 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊಸಪೇಟೆಯಿಂದ ವಿಜಯಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೂಡಗು ನಿವಾಸಿ ನೂರ್‌ಖಾನ್ ಧಪೇದಾರ್ ಎಂಬಾತನ ಬಳಿ ಹಣ ಪತ್ತೆ ಆಗಿದೆ. ದಾಖಲೆ ಇಲ್ಲದ ಕಾರಣಕ್ಕೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈರುಳ್ಳಿ ಮಾರಾಟ ಮಾಡಿ ಬಂದಿರುವ ಹಣವಿದು ಎಂದು ನೂರ್‌ಖಾನ್ ಹೇಳಿಕೆ ನೀಡಿದ್ದಾರೆ. ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ನಿಡಗುಂದಿ ತಹಸೀಲ್ದಾರ್ ಕಿರಣ ಕುಮಾರ್ ಕುಲಕರ್ಣಿ ಸೂಚಿಸಿದ್ದಾರೆ.
ಮಂಡ್ಯದಲ್ಲಿ ದಾಖಲೆ ಇಲ್ಲದ ನಗದು, ಮದ್ಯ ವಶ
ಮಂಡ್ಯದಲ್ಲಿ ದಾಖಲೆ ಇಲ್ಲದ ನಗದು ಹಾಗೂ ಮದ್ಯ ವಸ್ತುಗಳನ್ನು ಸೀಜ್ ಮಾಡಲಾಗಿದೆ. ನಗದು, ಮದ್ಯ, ಡ್ರಗ್ಸ್, ಸೇರಿ ಹಲವು ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಒಂದು ವಾರದಲ್ಲಿ 1 ಕೋಟಿ 12 ಲಕ್ಷ ಮೌಲ್ಯದ ನಗದು, ವಸ್ತುಗಳ ಸೀಜ್ ಮಾಡಲಾಗಿದೆ.
ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದು, ಈಗಾಗಲೇ ಚುನಾವಣೆ ಆಯೋಗದ ನಿರ್ದೇಶನದಂತೆ ಸಿದ್ದತೆ ನಡೆದಿದೆ. ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕೊಟ್ಟು 12 ಡಿ ನಮೂನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ 60 ಸಾವಿರ ನಮೂನೆ ವಿತರಣೆ ಮಾಡಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಸಿಸಿಟಿವಿ ಮೂಲಕವು ನಿಗಾ ವಹಿಸುವ ಕೆಲಸ ಆಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸೀರೆ, ನಗದು ಸೀಜ್
ಚಿಕ್ಕಮಗಳೂರು ತಾಲೂಕಿನ ಮಾಗಡಿ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಸೀರೆ, ನಗದು ಸೀಜ್ ಮಾಡಲಾಗಿದೆ. 2ಲಕ್ಷ ರೂ. ನಗದು ಹಾಗೂ 453 ಸೀರೆಗಳನ್ನು ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಬಳಿ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Amul : ನಂದಿನಿ ಜತೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅಮುಲ್ ಎಂಡಿ
ಟೆಂಪೋದಲ್ಲಿ ದಾಖಲೆಯಿಲ್ಲದ 40 ಲಕ್ಷ ರೂ ಪತ್ತೆ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂ.ಯನ್ನು ಪೊಲೀಸರು ವಶ ಪಡೆಯಲಾಗಿದೆ. ಶಿವಯೋಗಿ ಮುದಿಗೌಡ್ರ ಎಚ್.ಡಿ.ಎಫ್.ಸಿ ಬ್ಯಾಂಕಿನ ಸಿಬ್ಬಂದಿ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಟೆಂಪೋದಲ್ಲಿ ಹೋಗುತ್ತಿದ್ದ ವೇಳೆ 40 ಲಕ್ಷ ರೂ. ಪತ್ತೆ ಆಗಿದೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.