Site icon Vistara News

Karnataka Election 2023: ಬೊಮ್ಮಾಯಿ, ಬಿ.ಸಿ. ಪಾಟೀಲ್‌, ಶ್ರೀರಾಮುಲು ಸೇರಿ ಹಲವರಿಗೆ ಬಿಜೆಪಿ ಟಿಕೆಟ್‌ ಫಿಕ್ಸ್

Karnataka Election 2023 updates Basavaraj Bommai BC Patil Sriramulu and others get Bjp ticket‌

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ಸ್ ರೆಸಾರ್ಟ್‌ನಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ಶನಿವಾರ (ಏ.1) ಹಲವು ಜಿಲ್ಲೆಗಳ ಕೋರ್‌ ಕಮಿಟಿ ಸಭೆಯನ್ನು ನಡೆಸಿದ್ದು, ಕೆಲವು ಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಮೂರು ಕ್ಷೇತ್ರಗಳ ಟಿಕೆಟ್‌ ಫೈನಲ್‌ ಆಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಅವರಿಗೆ ಟಿಕೆಟ್‌ ಖಾತ್ರಿಯಾಗಿದೆ. ಇನ್ನು ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಬೆಂಬಲಿಗರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಹಾವೇರಿಯಲ್ಲಿ ಮೂರು ಕ್ಷೇತ್ರ ಫಿಕ್ಸ್‌

ಹಾವೇರಿ ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಕಾರ್ಯ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು ಪಕ್ಕಾ ಮಾಡಲಾಯಿತು. ಜತೆಗೆ ಹಿರೇಕೆರೂರಿಗೆ ಸಚಿವ ಬಿ.ಸಿ. ಪಾಟೀಲ್‌ ಹಾಗೂ ಬ್ಯಾಡಗಿಗೆ ವಿರೂಪಾಕ್ಷಪ್ಪ ಬಳ್ಳಾರಿಗೆ ಟಿಕೆಟ್ ಅನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ ಮೂರು ಕ್ಷೇತ್ರಗಳನ್ನು ಹಾಲಿ ಶಾಸಕರಿಗೇ ನೀಡಲಾಗಿದೆ.

ಓಲೇಕಾರ್‌ಗೆ ಟಿಕೆಟ್‌ ಬೇಡವೆಂದ ಕಮಿಟಿ

ಈ ವೇಳೆ ಹಾವೇರಿ ಕ್ಷೇತ್ರದ ಶಾಸಕ ನೆಹರೂ ಓಲೇಕಾರ್‌ಗೆ ಟಿಕೆಟ್ ಕೊಡದಂತೆ ಅಭಿಪ್ರಾಯ ವ್ಯಕ್ತವಾಗಿದೆ. ನೆಹರೂ ಓಲೇಕಾರ್, ನಕಲಿ ಬಿಲ್‌ಗಳ ಸೃಷ್ಟಿ ಪ್ರಕರಣದಲ್ಲಿ ಅಪರಾಧಿಯಾಗಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಓಲೇಕಾರ್ ಬದಲು ಬೇರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ಹಾವೇರಿ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.

ಇದನ್ನೂ ಓದಿ: Lokayukta Raid : ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಏಪ್ರಿಲ್‌ 11ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ

ಇನ್ನು ರಾಣೆಬೆನ್ನೂರಿನಲ್ಲಿ ಪರಿಷತ್ ಸದಸ್ಯ ಆರ್. ಶಂಕರ್ ಪರ ಯಾರೂ ಒಲವು ತೋರಿಲ್ಲ. ಆದರೆ, ಈ ಕ್ಷೇತ್ರದ ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ್ ಪರ 50:50 ಅಭಿಪ್ರಾಯ ಸಲ್ಲಿಕೆಯಾಗಿದೆ. ಹಾನಗಲ್ ಕ್ಷೇತ್ರದಲ್ಲಿ ದಿವಂಗತ ಸಿ.ಎಂ. ಉದಾಸಿ ಕುಟುಂಬದವರಿಗೆ ಟಿಕೆಟ್ ಕೊಡುವಂತೆ ಕೋರ್ ಕಮಿಟಿಯ ಹಲವು ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಶ್ರೀರಾಮುಲುಗೆ ಟಿಕೆಟ್‌ ಫಿಕ್ಸ್‌

ಬಳ್ಳಾರಿ ಜಿಲ್ಲಾ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ ಮುಕ್ತಾಯವಾಗಿದ್ದು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲುಗೆ‌ ಟಿಕೆಟ್ ಅನ್ನು ಅಂತಿಮಗೊಳಿಸಲಾಗಿದೆ. ಶ್ರೀರಾಮುಲು ಪರ ಬಳ್ಳಾರಿ ಕೋರ್ ಕಮಿಟಿ ಸದಸ್ಯರು ಒಲವು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದಿದ್ದ ಶ್ರೀರಾಮುಲು ಈ ಬಾರಿ ಆ ಕ್ಷೇತ್ರವನ್ನು ತೊರೆದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ಕುಮಟಳ್ಳಿಗೇ ಟಿಕೆಟ್‌ ಕೊಡಿ; ರಮೇಶ್‌ ಜಾರಕಿಹೊಳಿ

ಬೆಳಗಾವಿ ನಗರ, ಗ್ರಾಮಾಂತರ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ ಮುಕ್ತಾಯವಾಗಿದ್ದು, ತಮ್ಮ ಬೆಂಬಲಿಗರಿಗೆ ಟಿಕೆಟ್‌ ನೀಡಬೇಕೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟುಹಿಡಿದಿದ್ದಾರೆ. ಅಥಣಿಯಲ್ಲಿ ಶತಾಯಗತಾಯ ಮಹೇಶ್ ಕುಮಟಳ್ಳಿಗೇ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪಿಸದೇ ಬೇರೆ ಯಾರಿಗೂ ಅಲ್ಲಿ ಟಿಕೆಟ್ ಕೊಡಬಾರದು ಎಂದು ಆಗ್ರಹಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಸೋಲಿಸುವ ಶಪಥ

ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಆಪ್ತ ನಾಗೇಶ ಮನ್ನೋಳ್ಕರ್‌ಗೆ ಟಿಕೆಟ್ ಕೊಡುವಂತೆ ರಮೇಶ್ ಜಾರಕಿಹೊಳಿ‌ ಆಗ್ರಹಿಸಿದ್ದು, ಲಕ್ಷ್ಮಿ‌ ಹೆಬ್ಬಾಳ್ಕರ್ ಅವರನ್ನು ಸೋಲಿಸುವ ಹೊಣೆ ನನ್ನದು. ನಾನು ಹೇಳಿದವರಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕಾಗವಾಡದಲ್ಲಿ ಶ್ರೀಮಂತ ಪಾಟೀಲ್‌ಗೆ ಟಿಕೆಟ್‌ ನೀಡಿ ಎಂದು ರಮೇಶ್‌ ಒತ್ತಾಯಿಸಿದ್ದಾರೆ.

ಕಲಬುರುಗಿ ದಕ್ಷಿಣದಲ್ಲಿ ಸಹೋದರರ ಸವಾಲ್‌

ಕಲಬುರುಗಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಇಲ್ಲಿ ಸಹೋದರರ ಸವಾಲ್‌ ಎದುರಾಗಿದೆ. ಈ ಕ್ಷೇತ್ರದ ಮೇಲೆ ರೇಣುಕಾಚಾರ್ಯ ಸಲಗಾರ್ ಕಣ್ಣಿಟ್ಟಿದ್ದು, ತಮಗೇ ಟಿಕೆಟ್‌ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಸತತ 25 ವರ್ಷಗಳ ಕಾಲ ನಾನು ತನು, ಮನ, ಧನ ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಹತ್ತಕ್ಕೂ ಹೆಚ್ಚು ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಹಲವರು ಪಕ್ಷ ಬದಲಾವಣೆ ಮಾಡುತ್ತಾರೆ. ಆದರೆ, ನಾನು ಮಾಡಿಲ್ಲ. ನಾನು ಕಲಬುರುಗಿ ಆಕಾಂಕ್ಷಿ ಇದ್ದೇನೆ. ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: JDS Politics : ಹಾಸನ ಟಿಕೆಟ್‌ ಈಗಾಗಲೇ ನಿರ್ಧಾರವಾಗಿದೆ ಎಂದ ದೇವೇಗೌಡ್ರು; ಭವಾನಿ ರೇವಣ್ಣ ಆಸೆಗೆ ಬಿತ್ತಾ ತಣ್ಣೀರು?

ನನ್ನ ಸಹೋದರ ಶರಣು ಸಲಗಾರ್‌‌ಗೆ ಸಹ ಬಿಜೆಪಿ ಅವಕಾಶ ಮಾಡಿ ಕೊಟ್ಟಿದೆ. ನಾನು ಸೇವೆ ಮಾಡಬೇಕೆನ್ನುವ ಸ್ವಾರ್ಥಿ ಇದ್ದೇನೆ. ಶರಣು ಸಲಗಾರ್ ಸೇರಿದಂತೆ ಇನ್ನಿತರ ನಾಯಕರಿಗಿಂತ ಹೆಚ್ಚು ಸೇವೆ ಮಾಡುವ ಸ್ವಾರ್ಥಿ ಇದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟುವಾಗ ನಾವು ಶಾಲೆಗೆ ಹೋಗುತ್ತಿದ್ದೆವು. ಈಗ ಪಕ್ಷದ ಎಲ್ಲ ಮುಖಂಡರನ್ನ ಭೇಟಿ ಆಗಿದ್ದೇನೆ. ನಾನು ಕೂಡ ಆಕಾಂಕ್ಷಿ ಎನ್ನುವ ವಿಚಾರವನ್ನು ತಿಳಿಸಿದ್ದೇನೆ. ನನಗೆ ಟಿಕೆಟ್ ಕೊಡದಿದ್ದರೂ ಹೆಚ್ಚು ಕೆಲಸ ಮಾಡುತ್ತೇನೆ ಎನ್ನುವ ಅಭಿಲಾಷೆ ಇದೆ ಎಂದು ಹೇಳಿದ್ದಾರೆ.

Exit mobile version