ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದೆ. ಈ ಮಧ್ಯೆ ಕುಟುಂಬ ರಾಜಕಾರಣದ ಕೂಗು ಕೇಳಿಬರುತ್ತಿದೆ. ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ಹಲವು ನಾಯಕರು ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಅಲ್ಲದೆ, ದೀರ್ಘಾವಧಿ ಅಧಿಕಾರವನ್ನು ಅನುಭವಿಸಿದ ಹಲವರಿಗೆ, ಕಳಂಕವನ್ನು ಹೊತ್ತ ಕೆಲವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಅನ್ನು ನಿರಾಕರಿಸಿದ್ದಲ್ಲದೆ. ಈ ಮಧ್ಯೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡದ ಬಿಜೆಪಿ ಹೈಕಮಾಂಡ್, ಅವರ ಪುತ್ರ ಕಾಂತೇಶ್‌ಗೂ ಟಿಕೆಟ್ ನೀಡಲು ಮುಂದಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ವರಿಷ್ಠರ ಈ ನಡೆ ವಿರುದ್ಧ ಈಶ್ವರಪ್ಪ ಅಭಿಮಾನಿಗಳು ಕೆಂಡಕಾರಿದ್ದು, ವರಿಷ್ಠರು ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿದ್ದು, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣವನ್ನು ಹಾಕಿದ್ದಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ವರಿಷ್ಠರ ವಿರುದ್ಧ ಅಸಮಾಧಾನ ತೋರಿಸಿರುವ ಈಶ್ವರಪ್ಪ ಅಭಿಮಾನಿಗಳು, ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಪೋಸ್ಟರ್‌ವೊಂದನ್ನು ಸಹ ಹರಿಬಿಡಲಾಗಿದೆ.
ಇದನ್ನೂ ಓದಿ: Karnataka Elections : ಪಕ್ಷ ಬಿಟ್ಟ ಶೆಟ್ಟರ್ ಏನೇನೋ ಮಾತನಾಡುವುದು ಸರಿಯಲ್ಲ ಎಂದ ನಳಿನ್ ಕುಮಾರ್ ಕಟೀಲ್
ಭ್ರಷ್ಟಾಚಾರ ಹಗರಣದಲ್ಲಿ ಜೈಲು ಸೇರಿದ್ದ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರರಿಗೆ ಈ ಬಾರಿ ವಿಧಾನಸಭೆಯಲ್ಲಿ ಟಿಕೆಟ್ ನೀಡಲಾಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್‌ಗೆ ಟಿಕೆಟ್ ಕೊಡಬಹುದು, ಸಚಿವ ಆನಂದಸಿಂಗ್ ಬದಲಿಗೆ ಅವರ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ಕೊಡಬಹುದು. ಆದರೆ, ನಮ್ಮ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರನಿಗೆ ಏಕೆ ಟಿಕೆಟ್ ಇಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
“ಯಾವುದೇ ಜೈಲು ಶಿಕ್ಷೆ ಅನುಭವಿಸದ, ಸದಾ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಈಶ್ವರಪ್ಪ ಅವರಿಗೆ ಏಕೆ ಈ ಅನ್ಯಾಯ? ಅವರ ಪುತ್ರ ಕಾಂತೇಶ್‌ಗೆ ಏಕೆ ಟಿಕೆಟ್ ನೀಡಲಾಗಿಲ್ಲ. ಹಿಂದುಳಿದ ವರ್ಗದ ನೇತಾರ, ಹಿಂದು ಹುಲಿ ಈಶ್ವರಪ್ಪ ಪುತ್ರನಿಗೆ ಮಾತ್ರ ಟಿಕೆಟ್ ಇಲ್ಲ? ಹೇಗಿದೆ ಬಿಜೆಪಿ ವರಿಷ್ಠರ ತಾರತಮ್ಯ ನೀತಿ?” ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಈಶ್ವರಪ್ಪ ಅಭಿಮಾನಿಗಳು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Karnataka Election 2023: ವರುಣದಲ್ಲಿ ಸೋಮಣ್ಣ ಹರಕೆಯ ಕುರಿ; ಇದಕ್ಕೆಲ್ಲ ಬಿ.ಎಲ್. ಸಂತೋಷ್ ಕಾರಣವೆಂದ ಸಿದ್ದರಾಮಯ್ಯ
ಸ್ವಯಂ ಚುನಾವಣಾ ನಿವೃತ್ತಿ ಘೋಷಿಸಿದ್ದ ಈಶ್ವರಪ್ಪ
ಬಿಜೆಪಿ ಟಿಕೆಟ್ ಘೋಷಣೆಗೂ ಮೊದಲೇ ಪತ್ರಿಕಾಗೋಷ್ಠಿ ನಡೆಸಿದ್ದ ಕೆ.ಎಸ್. ಈಶ್ವರಪ್ಪ ಅವರು ಸ್ವಯಂ ಆಗಿ ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಈಗ ಪಕ್ಷ ನನ್ನ ಅನುಭವವನ್ನು ಪಕ್ಷದ ಚಟುವಟಿಕೆಗೆ ಬಳಸುವಂತೆ ಕೇಳಿದೆ. ಈ ಹಿನ್ನೆಲೆಯಲ್ಲಿ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದರು. ಈ ನಡುವೆ ತೆರೆಮರೆಯಲ್ಲಿ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಸಾಕಷ್ಟು ಒತ್ತಡವನ್ನು ಅವರು ತರುತ್ತಿದ್ದಾರೆ ಎನ್ನಲಾಗಿದೆ. ಆದರೆ, 222 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿ ಇನ್ನೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಪೆಂಡಿಂಗ್ ಇಟ್ಟಿದೆ. ಇಷ್ಟರ ನಡುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.