ಮಂಡ್ಯ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಣ ರಂಗೇರಿದೆ. ಈಗಾಗಲೇ ಇಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಾಕದೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲವನ್ನು ಪ್ರಕಟಿಸಿದೆ. ಈಗ ಈ ಕ್ಷೇತ್ರದಲ್ಲಿ ಪುತ್ರನಿಗೂ ಮೊದಲೇ ರೈತ ನಾಯಕ ದಿ. ಪುಟ್ಟಣ್ಣಯ್ಯ ಅವರ ಪತ್ನಿ ಸುನಿತಾ (ಸುಂದರಮ್ಮ) ಪುಟ್ಟಣ್ಣಯ್ಯ ಅವರು ಗುರುವಾರ (ಏ. 13) ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸುನಿತಾ ಪುಟ್ಟಣ್ಣಯ್ಯ ಅವರು ಪಾಂಡವಪುರ ಮಿನಿ ವಿಧಾನಸೌಧದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿಯೇ ನಾಮಪತ್ರವನ್ನು ಸಲ್ಲಿಸಿದ್ದು, ಇದು ಹಲವು ಚುನಾವಣೆಗಳಲ್ಲಿ ನಡೆದುಕೊಂಡು ಬಂದ ಪರಿಪಾಠ ಎಂದು ಹೇಳಲಾಗಿದೆ. ಈ ಹಿಂದೆ ಪುಟ್ಟಣ್ಣಯ್ಯ ಅವರು ನಾಮಪತ್ರ ಸಲ್ಲಿಸುವಾಗಲೂ ಹೀಗೆ ಬೇರೊಬ್ಬರಿಂದ ನಾಮಪತ್ರವನ್ನು ಸಲ್ಲಿಸುತ್ತಿದ್ದರು.
ಇದನ್ನೂ ಓದಿ: Elephant Rescue Operation: ತೋಟದ ಕಾಲುವೆಗೆ ಆಯತಪ್ಪಿ ಬಿದ್ದ ಕಾಡಾನೆಗಳು; ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಪಕ್ಷದ ಬಿ.ಫಾರಂ ಸಿಗುವ ಮುನ್ನವೇ ಸುನಿತಾ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಸರ್ವೋದಯ ಕರ್ನಾಟಕ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ ಅವರ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿಯನ್ನು ಹಾಕದೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿದೆ.
ಆದರೆ, ಈಗ ಪುತ್ರ ದರ್ಶನ್‌ಗೂ ನಾಮಪತ್ರ ಸಲ್ಲಿಕೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ, ಯಾವುದಾದರೂ ತಾಂತ್ರಿಕ ತೊಡಕು ಉಂಟಾದರೆ, ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷದಿಂದ ಮತ್ತೊಬ್ಬ ಅಭ್ಯರ್ಥಿ ಇರಲಿ ಎಂಬ ಕಾರಣಕ್ಕೆ ಸುನಿತಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜತೆಗೆ ಇವರಿಗೆ ಸ್ಥಳೀಯ ರೈತ ಮುಖಂಡರು ಸಾಥ್ ನೀಡಿದ್ದಾರೆ.
ಕಳೆದ ಬಾರಿಯೂ ಬೆಂಬಲ ನೀಡಿದ್ದ ಕಾಂಗ್ರೆಸ್
ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅವರು ಕಾಂಗ್ರೆಸ್ ಪಕ್ಷದ ಜತೆಗಿದ್ದರು. ಅವರ ನಿಧನಾನಂತರ ಪುತ್ರ ದರ್ಶನ್ ಅವರು 2018ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ತಂದೆ ಪಕ್ಷದ ಜತೆಗಿದ್ದರು ಎಂಬ ಕಾರಣಕ್ಕೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿತ್ತು. ಆದರೆ, ಆ ಬಾರಿ ದರ್ಶನ್ ಸೋಲು ಕಂಡಿದ್ದರು.
ಇದನ್ನೂ ಓದಿ: JDS Politics : ಹಾಸನ ಜೆಡಿಎಸ್ ತಿಕ್ಕಾಟಕ್ಕೆ ರಾಜೀ ಸೂತ್ರ; ಭವಾನಿ ರೇವಣ್ಣಗೆ ಚಾಮರಾಜ ಕ್ಷೇತ್ರದ ಟಿಕೆಟ್?
ಈ ಬಾರಿ ಸಹ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಕಣಕ್ಕಿಳಿದು, ಅಬ್ಬರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲದೆ, ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿಯನ್ನು ಹಾಕದೆ ದರ್ಶನ್‌ಗೆ ಬೆಂಬಲ ನೀಡಿದೆ. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ವಕ್ತಾರ ಚೆಲುವರಾಯಸ್ವಾಮಿ, ಕಳೆದ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದರೆ ಈ ಬಾರಿ ಚುನಾವಣೆಯಲ್ಲಿ ದರ್ಶನ್‌ಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇರುತ್ತಿರಲಿಲ್ಲ. ಆದರೆ, ಆಗ ಅವರು ಸೋಲು ಕಂಡ ಹಿನ್ನೆಲೆಯಲ್ಲಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಈ ಬಾರಿಯೂ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದರು.