Site icon Vistara News

Karnataka Election 2023: ಅಥಣಿಯಿಂದ ಸ್ಪರ್ಧೆ ಮಾಡುವೆನೆಂದ ಲಕ್ಷ್ಮಣ ಸವದಿ; ಜಾರಕಿಹೊಳಿಗೆ ಸೆಡ್ಡು

Karnataka Election 2023 updates Will contest from Athani Will ask for ticket from high command says

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಾಂಕ ನಿಗದಿಯಾಗುತ್ತಿದ್ದಂತೆ ಆಯಾ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ಚಟುವಟಿಕೆ ಸಹ ಚುರುಕಾಗಿದೆ. ಈಗ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಎದುರಾಗಿದೆ. ಈ ಕ್ಷೇತ್ರದಲ್ಲಿ ಹಾಲಿ ಮಹೇಶ್‌ ಕುಮಟಳ್ಳಿ ಶಾಸಕರಾಗಿದ್ದಾರೆ. ಆದರೆ, ಅಲ್ಲಿಗೆ ತಮಗೇ ಟಿಕೆಟ್‌ ಬೇಕೆಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಪಟ್ಟುಹಿಡಿದಿದ್ದಾರೆ. ಈಗ ಈ ಬಗ್ಗೆ ಬೆಂಬಲಿಗರ ಸಭೆ ನಡೆಸಿ, ಹೈಕಮಾಂಡ್‌ ಬಳಿ ತಾವೇ ಸ್ಪರ್ಧೆ ಮಾಡುವುದಾಗಿ ಬೇಡಿಕೆಯನ್ನು ಇಡುತ್ತೇನೆ ಎಂದು ಹೇಳಿದ್ದಾರೆ.

ಈ ಬೆಳವಣಿಗೆ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿಗೆ ಶಾಕ್ ಕೊಟ್ಟಿದ್ದಾರೆ. ಟಿಕೆಟ್ ವಿಚಾರದಲ್ಲಿ ಕಾರ್ಯಕರ್ತರ ಜತೆಗೆ ಅಥಣಿಯಲ್ಲಿ ಗೌಪ್ಯ ಸಭೆ ನಡೆಸಿದ ಸವದಿ ಈ ತೀರ್ಮಾನವನ್ನು ಪ್ರಕಟಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: High Court order: ತುಮಕೂರು ಗ್ರಾಮಾಂತರ ಜೆಡಿಸ್‌ ಶಾಸಕ ಗೌರಿಶಂಕರ್‌ ಶಾಸಕತ್ವದಿಂದ ಅನರ್ಹ: ಕೋರ್ಟ್‌ ಆದೇಶ

ಹೈಕಮಾಂಡ್‌ ಕಂಡೀಷನ್‌ ಹಾಕ್ತೇನೆ

ಮಾ. 31ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕೋರ್ ಕಮಿಟಿ ಸಭೆ ಇದೆ. ಸಭೆಯಲ್ಲಿ ಅಥಣಿ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡಿ, ಬದಲಾಗಿ ಮಹೇಶ್ ಕುಮಟಳ್ಳಿಗೆ ನನ್ನ ಉಳಿಕೆ ಅವಧಿಗೆ ಎಂಎಲ್‌ಸಿ ಮಾಡಿ ಎಂದು ಕಂಡೀಷನ್ ಹಾಕುತ್ತೇನೆ. ನನಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಕೇಳುತ್ತೇನೆ ಎಂದು ಹೇಳಿದ್ದಾರೆ.

ಈ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಮುಖಂಡರು ಸೇರಿದ್ದೀರಿ. ನೀವು ಒಬ್ಬೊಬ್ಬರಿಗೂ ನೂರು ವೋಟ್ ಹಾಕಿಸುವಷ್ಟು ತಾಕತ್ತು ಇದೆ. ನನ್ನನ್ನು ನಿಮ್ಮ ಮನೆ ಮಗ ಅಂದುಕೊಂಡು ಆಯ್ಕೆ ಮಾಡಬೇಕು. ನನಗೆ ರಾಜಕೀಯ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಆಗಿದೆ. ನೀವು ನನಗೆ ಆಶೀರ್ವಾದ ಮಾಡಬೇಕು. ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಪಕ್ಷ ಅಂದರೆ ಹೆತ್ತ ತಾಯಿ ಸಮಾನ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಇದನ್ನೂ ಓದಿ: Karnataka Elections : ಸಿದ್ದು ಒಂದೇ ಕಡೆ ನಿಂತ್ರೆ ಡೇಂಜರ್‌, ಎರಡೂ ಕಡೆ ನಿಂತ್ರೆ ಡಬಲ್‌ ಗೆಲುವು; ಇದು ದೇವಿ ಅರ್ಚಕನ ಭವಿಷ್ಯ

ಪಕ್ಷೇತರವಾಗಿ ಸ್ಪರ್ಧಿಸಲು ಒತ್ತಾಯ

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೋ ಬೇಡವೇ ಎಂಬ ಚರ್ಚೆ ಸಭೆಯಲ್ಲಿ ಪ್ರಾರಂಭವಾಗುತ್ತಿದ್ದಂತೆ ಎಲ್ಲರೂ ಒಮ್ಮತದಿಂದ ಸ್ಪರ್ಧೆ ಮಾಡಬೇಕು ಎಂಬ ಅಭಿಪ್ರಾಯವನ್ನು ಸೂಚಿಸಿದ್ದಾರೆ. ಇದೇ ವೇಳೆ ಒಮ್ಮೆ ಪಕ್ಷ ಟಿಕೆಟ್‌ ನೀಡದೇ ಇದ್ದರೆ ಎಂಬ ಪ್ರಶ್ನೆ ಬಂದಿದೆ. ಆಗ ಬೆಂಬಲಿಗರು, ಒಂದು ವೇಳೆ ಟಿಕೆಟ್‌ ಸಿಗದೇ ಇದ್ದರೆ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಸವದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ. ಆದರೆ, ಒಂದು ವೇಳೆ ಟಿಕೆಟ್‌ ಸಿಗದೇ ಇದ್ದರೆ ಸವದಿ ಯಾವ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

ರಮೇಶ್‌ ಜಾರಕಿಹೊಳಿಗೆ ಸೆಡ್ಡು

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಬೆಳಗಾವಿ ಭಾಗದಲ್ಲಿ ತಮ್ಮದೇ ಪ್ರಭಾವವನ್ನು ಹೊಂದಿದ್ದಾರೆ. ಅಲ್ಲದೆ, ಕಳೆದ ಬಾರಿ ಅವರ ಬೆಂಬಲಿಗ ಮಹೇಶ್‌ ಕುಮಟಳ್ಳಿ ಅವರನ್ನು ಕಾಂಗ್ರೆಸ್‌ನಿಂದ ಕರೆತಂದು ಬಿಜೆಪಿಯಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಈ ಬಾರಿಯೂ ಅವರು ಮಹೇಶ್‌ ಕುಮಟಳ್ಳಿ ಅವರಿಗೇ ಟಿಕೆಟ್‌ ನೀಡಬೇಕು ಎಂದು ಪಟ್ಟುಹಿಡಿದ್ದಾರೆ. ಆದರೆ, ಈ ನಡುವೆ ಈ ಕ್ಷೇತ್ರದ ಹಳೇ ಸ್ಪರ್ಧಿ ಹಾಲಿ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅಡ್ಡಗಾಲು ಹಾಕಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈಗ ಬೆಂಬಲಿಗರ ಸಭೆ ನಡೆಸಿ ಟಿಕೆಟ್‌ ಕೇಳುವ ಬಗ್ಗೆಯೂ ಘೋಷಣೆ ಮಾಡಿರುವುದರಿಂದ ರಮೇಶ್‌ ಜಾರಕಿಹೊಳಿ ಅವರ ನಡೆ ಏನೆಂಬುದು ಕುತೂಹಲ ಮೂಡಿಸಿದೆ.

Exit mobile version