ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಒಂದೆಡೆ ಚುನಾವಣಾ ಆಯೋಗ (Election Commission) ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ (Voting awareness) ಮೂಡಿಸುತ್ತಿದೆ. ಮತ್ತೊಂದು ಕಡೆ ಮತದಾನಕ್ಕೆ ಉತ್ತೇಜನ ನೀಡಲು ಬೆಂಗಳೂರಿನ ಹೋಟೆಲ್‌ವೊಂದು ಮತದಾರರಿಗೆ ಭರ್ಜರಿ ಆಫರ್ (offer for voters) ಕೊಡುತ್ತಿದೆ.
ಮೇ 10ಕ್ಕೆ ವೋಟ್ ಹಾಕುವ ಮತದಾರರಿಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್ ಆಫರ್ ನೀಡುತ್ತಿದೆ. ಚುನಾವಣೆ ದಿನ ಮತ ಹಾಕಿ ಬಂದವರಿಗೆ ಬಾಯಲ್ಲಿ ನೀರೂರಿಸುವ ಬೆಣ್ಣೆ ದೋಸೆ, ಮೈಸೂರ್ ಪಾಕ್ ಹಾಗೂ ಕೂಲ್ ಡ್ರಿಂಕ್ಸ್ ಅನ್ನು ಉಚಿತವಾಗಿ ಕೊಡಲು ತಯಾರಿ ನಡೆಸಿದೆ. ಇದೇ ಮೊದಲ ಬಾರಿ ವೋಟ್ ಮಾಡುವ 100 ಯುವ ಮತದಾರರಿಗೆ ಸಿನಿಮಾ ಟಿಕೆಟ್ ಅನ್ನು ಉಚಿತವಾಗಿ ಕೊಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕ ಕೃಷ್ಣರಾಜ್, ಬೆಂಗಳೂರಲ್ಲಿ ಕಳೆದ ಬಾರಿ ಕೇವಲ ಶೇಕಡ 50ರಷ್ಟು ಮಾತ್ರ ಮತದಾನ ಪ್ರಕ್ರಿಯೆ ಆಗಿತ್ತು. ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಈ ಕೆಲಸಕ್ಕೆ ನಾವು ಕೂಡ ಕೈಜೋಡಿಸಲು ಸಜ್ಜಾಗಿದ್ದೇವೆ.
ಮತದಾರರು ವೋಟ್ ಮಾಡಿ ಬಂದು ಬೆರಳ ಮೇಲಿನ ಶಾಯಿ ತೋರಿಸಿದರೆ ಅವರಿಗೆ ಬೆಣ್ಣೆ ದೋಸೆ ಹಾಗೂ ಮೈಸೂರ್ ಪಾಕ್, ಜತೆಗೆ ಕೂಲ್ ಡ್ರಿಂಕ್ಸ್ ನೀಡಲಾಗುತ್ತದೆ. ಬೆಂಗಳೂರಲ್ಲಿ ಹೆಚ್ಚಾಗಿ ಯುವ ಮತದಾರರು ಇರುವುದರಿಂದ ಅವರಿಗೆ ಉಚಿತವಾಗಿ ಸಿನಿಮಾ ಟಿಕೆಟ್ ಅನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಮತದಾನವನ್ನು ಹಬ್ಬದಂತೆ ಸಂಭ್ರಮಿಸಲು ಎಲ್ಲ ತಯಾರಿಯೂ ನಡೆದಿದೆ. ಉದ್ಯಾನನಗರಿ ಮಂದಿ ಯಾವ ರೀತಿಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಹೋಟೆಲ್ ಮಾಲೀಕರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಸಾಮಾಜಿಕ ಕಳಕಳಿ ತೋರಿರುವುದು ಸ್ವಾಗತಾರ್ಹವಾಗಿದೆ.