ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ವಿನೂತನವಾಗಿ ಪ್ರಯತ್ನ ನಡೆದಿದೆ. ಹೊಸ ರೀತಿಯಲ್ಲಿ, ಕಡಲಾಳದಲ್ಲಿ ಸ್ಕ್ಯೂಬಾ ಡೈವಿಂಗ್ (Scuba diving) ಮೂಲಕ ನಡೆದಿರುವ ವಿಶಿಷ್ಟ ಯತ್ನವಿದು.
ಮುರ್ಡೇಶ್ವರದ ನೇತ್ರಾಣಿ ನಡುಗಡ್ಡೆ ಬಳಿ ಸ್ಕ್ಯೂಬಾ ಡೈವಿಂಗ್ ಮೂಲಕ ಮತದಾನ ಜಾಗೃತಿ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಸ್ವೀಪ್ ಕಾರ್ಯಕ್ರಮದಲ್ಲಿ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಭಟ್ಕಳ ತಾಲ್ಲೂಕಿನ ಕರಾವಳಿಯ ಕಡಲಾಳದಲ್ಲಿ ಅಪರೂಪದ ಹವಳ, ಜಲಚರಗಳ ನಡುವೆ ಮತದಾನ ಜಾಗೃತಿ ನಡೆಸಲಾಯಿತು.
‘ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು’ ಎಂದು ಬರೆದ ಭಿತ್ತಿಚಿತ್ರವನ್ನು ಸ್ಕ್ಯೂಬಾ ಡೈವಿಂಗ್ ಮಾಡುವ ಮೂಲಕ ಕಡಲಿನಾಳದಲ್ಲಿ ಹಿಡಿದು ಪ್ರದರ್ಶಿಸಿ ಅದನ್ನು ದಾಖಲೀಕರಿಸಿಕೊಳ್ಳಲಾಯಿತು. ಇದರ ಫೋಟೋ ಹಾಗೂ ವಿಡಿಯೋಗಳನ್ನು ಮತದಾನದ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಭಟ್ಕಳ ತಾಲೂಕು ಪಂಚಾಯತ್, ಸ್ಕ್ಯೂಬಾ ಡೈವಿಂಗ್ ಅಡ್ವೆಂಚರ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ.
ಮುರ್ಡೇಶ್ವರದ ಬಳಿಯ ನೇತ್ರಾಣಿ ದ್ವೀಪದ ಬಳಿ ಕರ್ನಾಟಕದ ಖ್ಯಾತ ಸ್ಕ್ಯೂಬಾ ಡೈವಿಂಗ್ ಸಾಹಸ ಕ್ರೀಡೆ ಅವಕಾಶವಿದೆ. ಇಲ್ಲಿ ಸ್ಕ್ಯೂಬಾ ಅಡ್ವೆಂಚರ್‌ಗಾಗಿ ರಾಜ್ಯದ ಹಾಗೂ ದೇಶದ ಎಲ್ಲೆಡೆಗಳಿಂದ ಸಾಹಸಪ್ರಿಯರು ಆಗಮಿಸುತ್ತಾರೆ. ಸಾಗರದಡಿಯ ಹವಳದ ದಿಬ್ಬಗಳೂ ನೇತ್ರಾಣಿ ದ್ವೀಪದ ಬಳಿ ಇವೆ.
ಇದನ್ನೂ ಓದಿ: Scuba Diving in India: ಸಾಗರದಾಳದ ವಿಸ್ಮಯ ನೋಡಿ: ಜೀವನದಲ್ಲಿ ಒಮ್ಮೆ ಮಾಡಿ ಸ್ಕೂಬಾ ಡೈವಿಂಗ್!