ಬೆಂಗಳೂರು: ವಯಸ್ಸಾದವರೇ ಎಲೆಕ್ಷನ್‌ಗೆ ಸ್ಪರ್ಧೆ ಮಾಡುತ್ತಾರೆ. ನಾವು ಯಾಕೆ ವೋಟ್ ಹಾಕಬೇಕು? ಎಂದು ಯುವಕನೊಬ್ಬ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪ್ರಶ್ನೆ ಮಾಡಿದ್ದಾನೆ. ಬೆಂಗಳೂರಲ್ಲಿ ಶೇಕಡಾ 100ರಷ್ಟು ಮತದಾನ (Voting Awareness) ಸಾಧಿಸಲು ಬಿಬಿಎಂಪಿ (Karnataka Election 2023) ಕಸರತ್ತು ಮಾಡುತ್ತಿದ್ದು, ಇದರ ಭಾಗವಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಟಿ-ಬಿಟಿ ಸಂಸ್ಥೆಗಳ ಜತೆ ಗುರುವಾರ (ಏ.13) ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ವೇಳೆ ರಾಜಧಾನಿ ಬೆಂಗಳೂರಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗಿ ಇದ್ದರೂ, ಮತದಾನದ ಪ್ರಮಾಣ ಮಾತ್ರ ಕಡಿಮೆ ಇದೆ. ಹೀಗಾಗಿ ಯುವಕರು ಮತ ಕೇಂದ್ರಗಳಿಗೆ ಬಂದು ವೋಟ್ ಮಾಡಲು ಏನು ಮಾಡಬಹುದು ಎಂದು ಯುವಕರಿಗೆ ಆಯುಕ್ತ ತುಷಾರ್ ಗಿರಿನಾಥ್ ಪ್ರಶ್ನೆ ಕೇಳಿದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುವಕನೊಬ್ಬ, ರಾಜ್ಯದಲ್ಲಿ ಪ್ರಮುಖವಾಗಿ ಮೂರು ಪಾರ್ಟಿಗಳಿವೆ. ಆದರೆ ವಯಸ್ಸಾದವರೇ ಎಲೆಕ್ಷನ್‌ಗೆ ಸ್ಪರ್ಧಿಸುತ್ತಾರೆ. ಆದರೆ ಅವರಿಗೆ ಯುವಕರ ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಕೆಲಸ ಮಾಡುತ್ತಾರೆ. ಹೀಗಾಗಿ ನಮಗೆ ವೋಟ್ ಹಾಕಲು ಇಷ್ಟವಾಗಲ್ಲ. ಯುವ ಚಿಂತನೆ ಹೊಂದಿದ ಯುವ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ನಮಗೂ ಮತಹಾಕಲು ಮನಸ್ಸು ಬರುತ್ತದೆ. ಅದರಲ್ಲೂ ನಮ್ಮಂತಹ ಮೊದಲ ಮತದಾರರಿಗೆ ಇಷ್ಟವಾಗುವ ಅಭ್ಯರ್ಥಿ ಕಣದಲ್ಲಿದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಯುವಕನ ಮಾತಿಗೆ ನಕ್ಕು ಪ್ರತಿಕ್ರಿಯಿಸಿದ ಆಯುಕ್ತ, ಜಿಲ್ಲಾ ಚುನಾವಣಾ ಮುಖ್ಯಾಧಿಕಾರಿ ತುಷಾರ್ ಗಿರಿನಾಥ್, ಇವತ್ತಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತಿದೆ. ಯಾವ ವಯಸ್ಸಿನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ಯಾರೇ ಅಭ್ಯರ್ಥಿ ನಿಮ್ಮ ಕ್ಷೇತ್ರದಲ್ಲಿ ನಿಲ್ಲಲಿ ನೀವೂ ಮತದಾನ ಮಾಡಬೇಕು. ನಿಮಗೆ ಅಭ್ಯರ್ಥಿ ಸರಿಯಿಲ್ಲ ಎಂದು ಅನ್ನಿಸಿದರೆ ನೋಟಾ ಆಯ್ಕೆಯೂ ಇದೆ. ಆ ಮೂಲಕವೂ ನಿಮ್ಮ ಹಕ್ಕುನ್ನು ಚಲಾಯಿಸಬಹುದು ಎಂದು ಮೊದಲ ಬಾರಿಗೆ ಮತದಾನ ಮಾಡುವವರಿಗೆ ಸಲಹೆ ನೀಡಿದರು.
ಐಟಿ-ಬಿಟಿ ಸಂಸ್ಥೆಗಳ ಜತೆ ಮತದಾನ ಜಾಗೃತಿ
ಎಲೆಕ್ಟ್ರಾನಿಕ್ ಸಿಟಿಯ ಟೆಕ್ ಮಹೀಂದ್ರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅನೇಕ ಸಂಸ್ಥೆಗಳ ಸಿಇಒಗಳು ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಮತದಾನ ಉತ್ಸವದಲ್ಲಿ ತಪ್ಪದೆ ಭಾಗವಹಿಸಿ ಮತದಾನ ಮಾಡಲು ತಿಳಿಸಲಾಗುವುದು ಎಂದು ತುಷಾರ್ ಗಿರಿನಾಥ್ ಅವರಿಗೆ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಳಿಗೆ ಮತದಾನ ಮಾಡುವ ಒಲವು ಹೆಚ್ಚಿರುವುದಿಲ್ಲ. ಈ ಸಂಬಂಧ ಅವರಲ್ಲಿರುವಂತಹ ತಪ್ಪು ಕಲ್ಪನೆ ಹಾಗೂ ಆಲೋಚನೆಗಳನ್ನು ಬದಲಿಸಿ ಎಲ್ಲರಿಂದಲೂ ಮತದಾನ ಮಾಡಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ ಎಂದರು.
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಹೆಚ್ಚು ಮತದಾನ ಮಾಡಿಸುವ ಉದ್ದೇಶವನ್ನಿಟ್ಟುಕೊಂಡು, ಎಲ್ಲಾ ಕಡೆ ಮತದಾನ ಜಾಗೃತಿ ಜಾಥಾ, ನಾಟಕ ಸೇರಿದಂತೆ ನಮ್ಮ ಬೆಂಗಳೂರು ಐಕಾನ್ಸ್‌ಗಳ ಮೂಲಕ ಮತದಾರರು ತಪ್ಪದೆ ಮತ ಚಲಾಯಿಸುವಂತೆ ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Elephant Rescue Operation: ತೋಟದ ಕಾಲುವೆಗೆ ಆಯತಪ್ಪಿ ಬಿದ್ದ ಕಾಡಾನೆಗಳು; ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಸಂಬಳ ಸಹಿತ ರಜೆ ನೀಡುವ ಭರವಸೆ
ಎಲೆಕ್ಟ್ರಾನಿಕ್ ಸಿಟಿಯ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮತದಾನ ದಿನವಾದ ಮೇ 10 ರಂದು ಎಲ್ಲರೂ ತಪ್ಪದೆ ಮತದಾನ ಮಾಡುವ ಸಲುವಾಗಿ ಸಂಬಳ ಸಹಿತ ರಜೆ ನೀಡಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂಗಪ್ಪ, ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ವಿವಿಧ ಸಂಸ್ಥೆಗಳ ಸಿಇಒಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.