ಬೆಂಗಳೂರು: ಉದ್ಯಾನನಗರಿ ಬೆಂಗಳೂರಲ್ಲಿ ಶೇ. 100ರಷ್ಟು ಮತದಾನ ಸಾಧಿಸಲು ಬಿಬಿಎಂಪಿ ಭಾರಿ ಸರ್ಕಸ್ ಮಾಡುತ್ತಿದೆ. ಬೆಂಗಳೂರು ಸಾಕ್ಷರತೆ ಹೊಂದಿರುವ ನಗರವಾಗಿದ್ದು, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮತದಾರರು ಇಲ್ಲದೆ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದವು. ಚುನಾವಣೆಗೆ ನೀರಸ ಪ್ರತಿಕ್ರಿಯೆ ಬೆಂಗಳೂರಿನಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾರರಿಗೆ ಅರಿವು ಮೂಡಿಸಲು ಮುಂದಾಗಿದೆ.
ಅತಿ ಕಡಿಮೆ ಮತದಾನ ಆಗುವ ನಗರವೆಂದು ಬೆಂಗಳೂರನ್ನು ಕರೆಯಲಾಗಿತ್ತು. ಹೀಗಾಗಿ ಈ ಹಣೆಪಟ್ಟಿಯನ್ನು ತೆಗೆದುಹಾಕಲು ನಗರದಲ್ಲಿ ಹೆಚ್ಚು ಮತದಾನ ಆಗುವ ರೀತಿಯಲ್ಲಿ ಬಿಬಿಎಂಪಿಯಿಂದ ಹೆಚ್ಚೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಬೆಂಗಳೂರು ನಗರದಲ್ಲಿ 95,13,830 ಮತದಾರರಿದ್ದಾರೆ. ಆದರೆ, ಮತದಾನ ಮಾಡುವ ಪ್ರಮಾಣ ಮಾತ್ರ ಕಡಿಮೆಯಿದೆ. ಮತಗಟ್ಟೆಗಳ ಬಳಿಯಿರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜತೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿರುವ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಶೇಕಡಾ 100ರಷ್ಟು ಮತದಾನ ಸಾಧಿಸಲು ಬಿಬಿಎಂಪಿಯು ಕಸದ ಆಟೋದಲ್ಲಿ ಮತದಾನದ ಬಗ್ಗೆ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: Karnataka Election 2023: ಇದು ನನ್ನ ಕೊನೆಯ ಚುನಾವಣೆ: ಸಚಿವ ಬಿ.ಸಿ. ಪಾಟೀಲ್
ಬೆಳ್ಳಂಬೆಳ್ಳಗ್ಗೆ ಮನೆ ಮನೆ ಕಸ ಎತ್ತುವ ಆಟೋಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಬಿಬಿಎಂಪಿಯಿಂದ ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳ ಜತೆಗೂ ಮಾತುಕತೆ ನಡೆಸಿ ಮತದಾನ ಜಾಗೃತಿಗೆ ಕಾರ್ಯಾಗಾರ ಮಾಡಲಾಗುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇಕಡಾ 54ರಷ್ಟು ಮತದಾನ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಬಾರಿ ಹೆಚ್ಚಿಗೆ ಮತದಾನ ಬೆಂಗಳೂರಿನಲ್ಲಿ ಆಗಬೇಕೆಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಮತದಾನ ಜಾಗೃತಿ ಅಭಿಯಾನ ಮಾಡುತ್ತಿದೆ.