ಬೆಂಗಳೂರು: ಮೇ 13ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಮತದಾನದಲ್ಲಿ ಶೇ. 73.19 ವೋಟಿಂಗ್ ನಡೆದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ದಾಖಲೆಯ ಮತದಾನವಾಗಿದೆ. 2018ರಲ್ಲಿ 72.1% ಮತದಾನ ನಡೆದಿದ್ದು, ಅದು 40 ವರ್ಷಗಳಲ್ಲೇ ಅತ್ಯಧಿಕ ಎಂಬ ದಾಖಲೆ ಬರೆದಿತ್ತು.
1957ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಯಾವತ್ತೂ 73.19% ಮತದಾನ ಆಗಿರಲಿಲ್ಲ. ಈಗ ಆಗಿರುವ ಮತದಾನದಲ್ಲಿ ಪುರುಷರು 73.68% ಮತ ಚಲಾಯಿಸಿದ್ದರೆ, ಮಹಿಳೆಯರ ಮತ ಚಲಾವಣೆ ಪ್ರಮಾಣ 72.17%. ಒಟ್ಟಾರೆಯಾಗಿ ರಾಜ್ಯದ 5.30 ಕೋಟಿ ಮತದಾರರ ಪೈಕಿ 3.88 ಕೋಟಿ ಜನ ಮತ ಚಲಾಯಿಸಿದ್ದಾರೆ.
ಹೊಸಕೋಟೆಯಲ್ಲಿ ಗರಿಷ್ಠ ಮತದಾನ
ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದಲ್ಲಿ (90.33%). ಎರಡನೇ ಸ್ಥಾನದಲ್ಲಿರುವುದು ಕೋಲಾರದ ಶ್ರೀನಿವಾಸಪುರ (89.56%), ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 89.50% ಮತ ದಾಖಲಾಗಿದೆ. ಇದು ಮೂರನೇ ಗರಿಷ್ಠ ಮತದಾನ.
ಅತಿ ಕಡಿಮೆ ಮತದಾನ ಎಲ್ಲಿ?
ಬೆಂಗಳೂರು ಉತ್ತರ ಜಿಲ್ಲೆಯ ಬೊಮ್ಮನಹಳ್ಲಿಯಲ್ಲಿ ಅತಿ ಕಡಿಮೆ ಅಂದರೆ 47.22% ಮತದಾನವಾಗಿದ್ದರೆ, ಎರಡನೇ ಸ್ಥಾನದಲ್ಲಿರುವುದು ದಾಸರಹಳ್ಳಿ (ಶೇ. 48.07), ಸಿ.ವಿ. ರಾಮನ್ ನಗರದಲ್ಲಿ ಶೇ. 49.07 ಮತದಾನವಾಗಿದ್ದು, ಮೂರನೇ ಕನಿಷ್ಠ ದಾಖಲೆಯಾಗಿದೆ.
ರಾಜ್ಯದ ಇತಿಹಾದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿರುವುದು 1957ರಲ್ಲಿ. ಇದು ಮೊದಲ ಚುನಾವಣೆಯಾಗಿತ್ತು. ಆಗ ಇದ್ದ ಒಟ್ಟಾರೆ ಮತದಾರರ ಸಂಖ್ಯೆ 1.25 ಕೋಟಿ. ಶೇ. 51.3 ಮತದಾನ ಅಂದು ದಾಖಲಾಗಿತ್ತು. ಆಗ ಇದ್ದ ಒಟ್ಟು 208 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 150 ಸ್ಥಾನಗಳಲ್ಲಿ ಗೆದ್ದು ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ದಾಖಲೆ ಮತದಾನ ನಡೆದ ದೇವರಾಜ ಅರಸು ಕಾಲ
ಆರಂಭಿಕ ಕೆಲವೊಂದು ವಿಧಾನಸಭಾ ಚುನಾವಣೆಗಳಲ್ಲಿ ಸಾಧಾರಣ ಎನ್ನುವ ಮತದಾನ ದಾಖಲಾಗಿತ್ತು. 1972ರಲ್ಲಿ ಶೇ. 61.57 ಮತದಾನ ದಾಖಲಾಗಿತ್ತು. ಆದರೆ, 1978ರಲ್ಲಿ ಇದು ಒಮ್ಮಿಂದೊಮ್ಮೆಗೇ 71.90%ಗೆ ಜಿಗಿಯುವ ಮೂಲಕ ಹೊಸ ದಾಖಲೆ ನಿರ್ಮಾಣ ಆಗಿತ್ತು. 1972ರಲ್ಲಿ ಸಿಎಂ ಆಗಿದ್ದ ದೇವರಾಜ ಅರಸು ಅವರು ಐದು ವರ್ಷದ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಿ ಚುನಾವಣೆಗೆ ಹೋಗಿದ್ದರು. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಒಂದುಗೂಡಿಸಿ ಅವರು ಸೃಷ್ಟಿಸಿದ್ದ ಅಹಿಂದ ಚಳುವಳಿ ಭಾರಿ ಸಂಚಲನ ಸೃಷ್ಟಿಸಿತ್ತು. ಹೀಗಾಗಿ ಮತದಾನ ಪ್ರಮಾಣವೂ ಭಾರಿ ಹೆಚ್ಚಿತ್ತು. ಅದರ ಫಲವಾಗಿ 224 ಸ್ಥಾನಗಳ ಪೈಕಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಜನತಾ ದಳ 59 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ದೇವರಾಜ ಅರಸು ಮತ್ತು ಇಂದಿರಾ ಗಾಂಧಿ ನಡುವೆ ಭಿನ್ನಮತ ಉಂಟಾಗಿ ಅವರು ಅಧಿಕಾರ ಕಳೆದುಕೊಂಡರು. 1980ರಲ್ಲಿ ಗುಂಡು ರಾವ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ದೇವರಾಜ ಅರಸು ಅವತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ತಮ್ಮದೇ ಹೊಸ ಪಕ್ಷ ಕಟ್ಟಿದರು.
1978ರಲ್ಲಿ ಆತ ಮತದಾನದ ಪ್ರಮಾಣ ದಾಖಲೆ (ಶೇ. 71.90) ಸುಮಾರು 40 ವರ್ಷಗಳ ಕಾಲ ಅಬಾಧಿತವಾಗಿತ್ತು. 2018ರಲ್ಲಿ ಶೇ. 72.1 ಮತದಾನ ನಡೆಯುವ ಮೂಲಕ ಈ ದಾಖಲೆ ಮುರಿದು ಬಿತ್ತು. 2023ರ ಚುನಾವಣೆಯಲ್ಲಿ ನಡೆದಿರುವ ಶೇ. 73.19 ಮತದಾನ ಈ ದಾಖಲೆಯನ್ನೂ ಮುರಿದಿದೆ.
1978ರ ಬಳಿಕದ ಏರಿಳಿತಗಳು
1978ರಲ್ಲಿ ಶೇ. 71.90 ಮತದಾನ ನಡೆದ ಟೆಂಪೋವನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1983ರ ಹೊತ್ತಿಗೆ ಅದು 65.67%ಗೆ ಇಳಿಯಿತು. ಅಂದರೆ ಸುಮಾರು ಶೇ. 6 ಕುಸಿತ. ಮುಂದೆ ಒಂದೊಂದು ಚುನಾವಣೆಯಲ್ಲೂ ಏರಿಳಿತಗಳಿದ್ದವು. 1994ರಲ್ಲಿ ಮತದಾನ ಪ್ರಮಾಣ 68.59 % ಇದ್ದರೆ 2004ಕ್ಕೆ ಅದು ಶೇ. 65.17ಕ್ಕೆ ಇಳಿಯಿತು. 2008ರ ಹೊತ್ತಿಗೆ ಈ ಪ್ರಮಾಣ ಶೇ. 64.68ಕ್ಕೆ ಕುಸಿಯಿತು. 2013ರಲ್ಲಿ ಈ ಪ್ರಮಾಣ ಶೇ. 70.23ಕ್ಕೇರಿತ್ತು.
2013ರ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಿಂದ ಸಿಡಿದು ಹೋಗಿ ಕರ್ನಾಟಕ ಜನತಾ ಪಕ್ಷವನ್ನು ಕಟ್ಟಿದ್ದರ ಫಲವಾಗಿ ಬಿಜೆಪಿ ಅತಿ ದೊಡ್ಡ ಹೊಡೆತವನ್ನು ಅನುಭವಿಸಿತು. 2008ರಲ್ಲಿ 110 ಸ್ಥಾನಗಳಲ್ಲಿ ಗೆದ್ದಿದ್ದ ಅದರ ಸ್ಥಾನ ಸಂಖ್ಯೆ 2013ಕ್ಕೆ 40ಕ್ಕೆ ಇಳಿದಿತ್ತು. ಕಾಂಗ್ರೆಸ್ ಶೇ. 54.46 ಮತಗಳೊಂದಿಗೆ 122 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಜೆಡಿಎಸ್‌ಗೂ 40 ಸ್ಥಾನ ಸಿಕ್ಕಿತ್ತು.
2018ರ ಚುನಾವಣೆಯಲ್ಲಿ ಶೇ. 72.1 ಮತದಾನ ನಡೆದಿದ್ದು, ಬಿಜೆಪಿ 104, ಕಾಂಗ್ರೆಸ್ 79, ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಜತೆ ಸೇರಿ ಸರ್ಕಾರ ಮಾಡಿದ್ದವು. ಮುಂದೆ ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ ಮೂವರು ಶಾಸಕರು ಪಕ್ಷಾಂತರ ಮಾಡಿ ಬಜೆಪಿ ಸೇರಿದ್ದರಿಂದ ಬಿಜೆಪಿ ಬಲ 121ಕ್ಕೆ ಜಿಗಿದಿತ್ತು.
2023ರ ಚುನಾವಣೆಯಲ್ಲಿ 73.1% ದಾಖಲೆ ಮತದಾನ ನಡೆದಿರುವುದು ಯಾರಿಗೆ ಅನುಕೂಲ ಎನ್ನುವುದನ್ನು ಮೇ 13ರಂದು ಪ್ರಕಟವಾಗಿರುವ ಫಲಿತಾಂಶ ನೋಡಿಯೇ ನಿರ್ಧರಿಸಬೇಕಾಗಿದೆ.
ಇದನ್ನೂ ಓದಿ : Karnataka Election 2023: ಫಲಿತಾಂಶಕ್ಕೆ ಮುನ್ನ ತಾರಕಕ್ಕೆ ಏರಿದ ಬೆಟ್ಟಿಂಗ್ ಹುಚ್ಚು, ಜಮೀನೇ ಮಾರಾಟ!