Site icon Vistara News

Karnataka Election : ಶಿವಮೊಗ್ಗದಲ್ಲಿ ಭರ್ಜರಿ ಬೇಟೆ; ಎಟಿಎಂ ವಾಹನಗಳಲ್ಲಿ ದಾಖಲೆ ಇಲ್ಲದ 9.15 ಕೋಟಿ ರೂ. ವಶಕ್ಕೆ

Cash seized from atm filling vehicles in shivamogga

ಶಿವಮೊಗ್ಗ: ಜಿಲ್ಲೆಯ ಮೂರು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 9.15 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಶಿವಮೊಗ್ಗದ ಸಾಗರ, ಸೊರಬ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ (Karnataka Election) ವ್ಯಾಪ್ತಿಯಲ್ಲಿ ಈ ಬೃಹತ್‌ ಮೊತ್ತದ ಹಣ ಪತ್ತೆಯಾಗಿದೆ. ಎಟಿಎಂಗೆ ಹಣ ತುಂಬುವ ವಾಹನಗಳಲ್ಲಿ ಈ ಹಣವನ್ನು ಅನಧಿಕೃತವಾಗಿ ತುಂಬಿಕೊಂಡು ಹೋಗಲಾಗುತ್ತಿತ್ತು. ಇದು ಯಾರ ಹಣ, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಚುನಾವಣೆಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಸಾಗರದಲ್ಲಿ 3.7 ಕೋಟಿ ರೂಪಾಯಿ ವಶಕ್ಕೆ

ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎಟಿಎಂಗೆ ಹಣ ಹಾಕುವ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಧಿಕೃತ ಮೊತ್ತಕ್ಕಿಂತ 3.7 ಕೋಟಿ ರೂ. ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. 3,07,50,000 ರೂ.ನಗದು ಹಣದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಶಿಕಾರಿಪುರ, ಸೊರಬದಲ್ಲೂ ಹಣ ಪತ್ತೆ

ಇನ್ನು ಶಿಕಾರಿಪುರ, ಸೊರಬ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇಂಥಹುದೇ ಘಟನೆ ನಡೆದಿದ್ದು, ದಾಖಲೆ ಇಲ್ಲದ 5.45 ಕೋಟಿ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಾಳಕೊಪ್ಪ, ಆನವಟ್ಟಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಎಟಿಎಂಗೆ ಹಣ ಸಾಗಿಸುವ ವ್ಯಾನ್‌ನಲ್ಲಿ ದಾಖಲೆ ಇಲ್ಲದ ಹಣ ಸಿಕ್ಕಿದೆ.

ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ 70 ಲಕ್ಷ ರೂ. ಹಣ ಜಪ್ತಿ

ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 70 ಲಕ್ಷ ಹಣ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಖಾಸಗಿ ಬ್ಯಾಂಕ್‌ಗೆ ಸೇರಿದ 70 ಲಕ್ಷ ರೂ. ಇದಾಗಿದ್ದು, SLBC ಮಾರ್ಗಸೂಚಿ ಅನುಸರಿಸದ ಹಿನ್ನೆಲೆಯಲ್ಲಿ ಹಣ ಜಪ್ತಿಯಾಗಿದೆ.

ಬೆಳಗಾವಿಯ ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್‌ ಬಳಿ ಬಸ್‌ ಒಂದರಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 65 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಬೆಳಗಾವಿಯಿಂದ ಗೋಕಾಕ ಮಾರ್ಗವಾಗಿ ಔರಾದ್‌ಗೆ ಹೊರಟಿದ್ದ ಬಸ್ ಇದಾಗಿದ್ದು, ಸಿಂಧಗಿಗೆ ಹೊರಟಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಗೋಕಾಕ‌ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ವಿಜಯನಗರದಲ್ಲೂ ಹಣ ಪತ್ತೆ

ವಿಜಯ ನಗರ ಜಿಲ್ಲೆಯ ಹೊಸಪೇಟೆ ಕಲ್ಲಹಳ್ಳಿ ಚೆಕ್‌ಪೋಸ್ಟ್‌ ಬಳಿ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಸಂಡೂರು ಪಟ್ಟಣದಿಂದ ಹೊಸಪೇಟೆ ಕಡೆ ಬರುವ ವಾಹನಗಳ ತಪಾಸಣೆ ವೇಳೆ ಈ ಹಣ ಸಿಕ್ಕಿದೆ. ಎರಡು ದಿನಗಳ ಹಿಂದೆ ಇದೇ ಚೆಕ್ ಪೋಸ್ಟ್ ನಲ್ಲಿ 2.50 ಲಕ್ಷ ರೂ. ಹಣ ಪತ್ತೆಯಾಗಿತ್ತು.

ಕಲ್ಲಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾದ ಹಣ

ಇದನ್ನೂ ಓದಿ : Karnataka elections 2023: ಬಳ್ಳಾರಿಯ ಚೆಕ್‌ ಪೋಸ್ಟ್‌ಗಳಲ್ಲಿ 20 ಲಕ್ಷ ರೂ. ಮೌಲ್ಯದ 90 ಸಾವಿರ ಲೀಟರ್‌ ಮದ್ಯ ವಶ

Exit mobile version