ಕಾರವಾರ: ಲಕ್ಷಾಂತರ ರೂಪಾಯಿ ಹಣವನ್ನು ಆಟೋದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಎಸ್ಎಸ್‌ಟಿ ತಂಡ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. ಇದೇ ವೇಳೆ ಗದಗದಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 8.25 ಲಕ್ಷ ಮೌಲ್ಯದ ಗಾಂಜಾ ಸಾಗಾಟ ಪತ್ತೆಯಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ನಡೆಯುತ್ತಿರುವ ತಪಾಸಣೆ ಸಂದರ್ಭ ಇಷ್ಟೊಂದು ಅಕ್ರಮ ಸಾಗಾಟಗಳು ಬಯಲಾಗುತ್ತಿವೆ.
ತಾಲೂಕಿನ ಚಂದಾವರ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಕುಮಟಾದತ್ತ ಹಣ ತುಂಬಿದ್ದ ಸೂಟ್‌ಕೇಸ್ ಇರಿಸಿಕೊಂಡು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಆಟೋದಲ್ಲಿದ್ದ ಸೂಟ್‌ಕೇಸ್‌ನಲ್ಲಿ 93.50 ಲಕ್ಷ ಹಣ ಪತ್ತೆಯಾಗಿದ್ದು, ಯಾವುದೇ ದಾಖಲೆ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಆಟೋದಲ್ಲಿದ್ದ ಕುಮಟಾ ತಾಲೂಕಿನ ಕಾಗಲ್ ಮೂಲದ ರವಿ ಪಂಡಿತ್ ಹಾಗೂ ಚಾಲಕ ಶಿವಮೊಗ್ಗ ಮೂಲದ ಭರತ್ ಎಂಬುವವರನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಹಂಚುವ ಉದ್ದೇಶದಿಂದಲೇ ಹಣವನ್ನ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು ಹಣವನ್ನ ಕುಮಟಾ ಉಪಖಜಾನೆಯಲ್ಲಿ ಇರಿಸಲಾಗಿದೆ. ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗಿದ್ದು ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಬಸ್ ನಿಲ್ದಾಣದಲ್ಲಿ 8.25 ಲಕ್ಷ ಮೌಲ್ಯದ ಗಾಂಜಾ ವಶ
ಗದಗ: ಗದಗ ಕೆ.ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ ಸುಮಾರು 8.25 ಕೆಜಿ ತೂಕದ, 8.25 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗದಗನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆ ಪೊಲೀಸರ ದಾಳಿ ಮಾಡಿದಾಗ ಈ ಪ್ರಮಾಣದ ಗಾಂಜಾ ಸಿಕ್ಕಿದೆ.
ಆಂಧ್ರಪ್ರದೇಶದ ನರಸಿಂಹ ಪಟ್ಟಣದಿಂದ ಗದಗ ಮಾರ್ಗವಾಗಿ ಗೋವಾಗೆ ಸಾಗಾಟ ಮಾಡುತ್ತಿದ್ದ ಈ ಗಾಂಜಾವನ್ನು ಬ್ಯಾಗ್ ನಲ್ಲಿ ಇಡಲಾಗಿತ್ತು. ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : Karnataka Election 2023: ನೆಲಮಂಗಲದಲ್ಲಿ 8.8 ಲಕ್ಷ ರೂ. ಮೌಲ್ಯದ ವೈನ್ ಜಪ್ತಿ