Site icon Vistara News

Karnataka Elections : ಪಕ್ಷೇತರ ಅಭ್ಯರ್ಥಿಯಾಗಿ ಅಖಂಡ ಕಣಕ್ಕೆ; ಕ್ಷೇತ್ರದಲ್ಲಿ ವಿರೋಧ ಇರುವುದರಿಂದ ಟಿಕೆಟ್‌ ಕೊಡುತ್ತಿಲ್ಲ ಎಂದ ಡಿಕೆಶಿ

Akhanda Srinivas murthy

#image_title

ಬೆಂಗಳೂರು: ಇಡೀ ರಾಜ್ಯದಲ್ಲಿ ಅತಿಗರಿಷ್ಠ ಅಂತರದ ಗೆಲುವು ಪಡೆದ ದಾಖಲೆ ಹೊಂದಿರುವ ಬೆಂಗಳೂರಿನ ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ (Karnataka Elections) ಅಖಂಡ ಶ್ರೀನಿವಾಸ ಮೂರ್ತಿ ಅವರು ಈ ಬಾರಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಕೆಜಿಹಳ್ಳಿ, ಡಿಜೆ ಹಳ್ಳಿ ಗಲಭೆ ಸಂಭವಿಸಿದ ಸಂದರ್ಭದಲ್ಲಿ ಶ್ರೀನಿವಾಸ ಮೂರ್ತಿ ಅವರ ಮನೆಯನ್ನು ಸುಟ್ಟುಹಾಕಲಾಗಿತ್ತು. ಈ ಬಾರಿ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನಿರಾಕರಿಸಲಿದೆ. ಇದರ ಸೂಚನೆ ಅರಿತ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕನೇ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅದರಲ್ಲಿ ನನ್ನ ಹೆಸರಿಲ್ಲ ಎಂದು ಗೊತ್ತಾಗಿದೆ. ನನಗೆ ಟಿಕೆಟ್ ತಪ್ಪಲು ಕಾಂಗ್ರೆಸ್ ನ ಹಿರಿಯ ನಾಯಕರು ಕಾರಣ. ನನ್ನನ್ನು ಜನರು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಆದರೂ ಟಿಕೆಟ್‌ ನಿರಾಕರಿಸಿರುವುದು ನೋವು ತಂದಿದೆ ಎಂದರು.

ʻʻ2020ರಲ್ಲಿ ನನ್ನ ಮನೆ ಸುಟ್ಟರು. ಹಾಗೆ ಸುಟ್ಟವರಿಗೆ ನಮ್ಮ ಹಿರಿಯ ನಾಯಕರ ಬೆಂಬಲ ಇದೆ. ನಮ್ಮ ಪ್ರದೇಶದ ಮೌಲಾನಾಗಳು ನನ್ನ ವಿರುದ್ಧ ಇದ್ದಾರೆ ಎಂಬ ಸುಳ್ಳು ಸುದ್ದಿ ಹರಡಿಸಲಾಗಿದೆ. ಕೆಲವರನ್ನು ಎತ್ತಿಕಟ್ಟಲಾಗಿದೆ. ನಿಜವೆಂದರೆ ನಮ್ಮ ಕ್ಷೇತ್ರದಲ್ಲಿ ಭೇದಭಾವ ಇಲ್ಲ. ಅದರೆ, ನನಗೆ ತೊಂದರೆ ಕೊಟ್ಟ ವ್ಯಕ್ತಿಗೆ ಟಿಕೆಟ್ ಕೊಡಿಸಲು ಈ ರೀತಿ ಮಾಡಿದ್ದಾರೆ. ನನ್ನನ್ನ ಬೇರೆ ಪಕ್ಷದಿಂದ ಕರೆದುಕೊಂಡು ಬಂದು ಈ ರೀತಿ ನಡೆಸಿಕೊಳ್ಳಬಾರದಿತ್ತುʼʼ ಎಂದು ಹೇಳಿದರು. ನಾನು ಈ ಕ್ಷಣವೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿ ಬಳಿಕ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕರು (ಸಿದ್ದರಾಮಯ್ಯ) ನನ್ನ ಜತೆ ಇದ್ದಾರೆ. ಇನ್ನೊಬ್ಬ ಹಿರಿಯ ನಾಯಕ (ಡಿ.ಕೆ.ಶಿವಕುಮಾರ್) ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದರು.

ಡಿ.ಕೆ. ಶಿವಕುಮಾರ್‌ ಹೇಳುವುದೇನು?

ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕ್ಷೇತ್ರದಲ್ಲಿ ವಿರೋಧವಿದೆ. ಅವರಿಗೆ ಟಿಕೆಟ್ ಕೊಟ್ರೆ ಸಪೋರ್ಟ್ ಮಾಡುವುದಿಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಮಡಿಕೇರಿಯಲ್ಲಿ ಹೇಳಿದರು.

ಅಖಂಡ ಮನೆ ಮೇಲಿನ ದಾಳಿ ಸಂದರ್ಭದಲ್ಲಿ ಮಸೀದಿಗಳಿಗೆ ಹಾನಿಯಾಗಿತ್ತು. ಮಸೀದಿಗಳ ಬಗ್ಗೆ ಬಿಜೆಪಿ ನಾಯಕರು ಹಗುರವಾಗಿ ಮಾತನಾಡಿದ್ದರು. ಆಗ ಅಖಂಡ ಅವರು ಆ ಬಗ್ಗೆ ಸ್ಪಷ್ಟೀಕರಣ ಕೊಡಲಿಲ್ಲ ಎನ್ನುವುದು ಮೌಲ್ವಿಗಳ ಆಕ್ಷೇಪ ಎನ್ನಲಾಗಿದೆ. ಅಖಂಡಗೆ ಟಿಕೆಟ್‌ ಕೊಟ್ಟರೆ ಅವರ ವಿರುದ್ಧ ಪ್ರಚಾರ ಮಾಡುವುದು ಮಾತ್ರವಲ್ಲ, ಶಿವಾಜಿನಗರ, ಹೆಬ್ಬಾಳ, ಬ್ಯಾಟರಾಯಣಪುರ, ಗಾಂಧಿ ನಗರ, ಶಾಂತಿ ನಗರದಲ್ಲಿ ಸಮುದಾಯ ನಿಮ್ಮ ವಿರುದ್ಧ ನಿಲ್ಲುತ್ತೆ ಎಂದು ಮೌಲ್ವಿಗಳು ಎಚ್ಚರಿಕೆ ಕೊಟ್ಟಿದ್ದರೆನ್ನಲಾಗಿದೆ.

ಈ ನಡುವೆ, ಭಾನುವಾರ ನಡೆದ ಅಂತಿಮ ಮಾತುಕತೆಯಲ್ಲಿ ಮೌಲಾನಾಗಳು ನಿಮ್ಮ ವಿರುದ್ಧ ಇರುವುದರಿಂದ ನಿಮಗೆ ಟಿಕೆಟ್‌ ಕೊಡಲಾಗದು. ಆದರೆ, ನಿಮ್ಮ ಪತ್ನಿಗೆ ಕೊಡಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್‌ ಹೇಳಿದ್ದರು ಎನ್ನಲಾಗಿದೆ. ಆದರೆ, ಅಖಂಡ ಅವರು ಈ ಆಪರನ್ನು ತಿರಸ್ಕರಿಸಿದ್ದರು.

ಇದನ್ನೂ ಓದಿ : Karnataka Election Live Updates: ಬಿಜೆಪಿಯ 3ನೇ ಪಟ್ಟಿ ಪ್ರಕಟ, ಜಗದೀಶ್ ಶೆಟ್ಟರ್ ವಿರುದ್ಧ ಮಹೇಶ್ ಟೆಂಗಿನಕಾಯಿಗೆ ಟಿಕೆಟ್

Exit mobile version