ಕಲಬುರಗಿ/ಕೋಲಾರ/ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಹಿರಿಯರು, ಮಹಿಳೆಯರು, ಯುವಕರು ಸೇರಿ ಹೆಚ್ಚಿನ ಜನ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಆದರೂ, ಕಲಬುರಗಿ, ಚಿಕ್ಕಮಗಳೂರು ಹಾಗೂ ಕೋಲಾರ ಸೇರಿ ಹಲವೆಡೆ ಗಲಾಟೆ, ಕಾರ್ಯಕರ್ತರ ಮಧ್ಯೆ ವಾಕ್ಸಮರದಂತಹ ಪ್ರಕರಣಗಳು ನಡೆದಿವೆ. ಕೋಲಾರ ಜಿಲ್ಲೆಯಲ್ಲಂತೂ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಮೇಲೆಯೇ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿ ನಗರದ ತಾರಫೈಲ್ ಬಡಾವಣೆಯ ಗ್ಲೋಬಲ್ ಶಾಲೆ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ ಕೇಳಿಬಂದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಾಂಗ್ರೆಸ್‌ನಿಂದ ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಹಾಗಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಸಿಬ್ಬಂದಿಯು ಪರಿಸ್ಥಿತಿ ತಿಳಿಗೊಳಿಸುತ್ತಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಗಲಾಟೆ
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ಗೂಂಡಾವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತಗಟ್ಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ರಮೇಶ್ ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್ ಅವರು ತಾಲೂಕಿನ ಆಲಂಬಗಿರಿ ಮತಗಟ್ಟೆಗೆ ಭೇಟಿ ನೀಡಿದಾಗ ಗಲಾಟೆ ನಡೆದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದುರೇ ಸ್ವತಂತ್ರ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ಸ್ವತಂತ್ರ ಅಭ್ಯರ್ಥಿಯನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ ಗಲಾಟೆಯ ವಿಡಿಯೊ
ಇದನ್ನೂ ಓದಿ: Karnataka Election: ಭಾರತ ವಿಶ್ವಗುರು ಆಗಲು ಮತ ಹಾಕಿ, ಮತದಾನ ಬಳಿಕ ದತ್ತಾತ್ರೇಯ ಹೊಸಬಾಳೆ ಹೇಳಿಕೆ
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆವಾಜ್
ಚಿಕ್ಕಮಗಳೂರಿನಲ್ಲೂ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ನಗರಸಭೆ ಅಧ್ಯಕ್ಷನಿಗೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಅವರು ಆವಾಜ್ ಹಾಕಿದ್ದಾರೆ. “ಯಾಕೋ ನಮ್ಮ ಕಾರ್ಯಕರ್ತನಿಗೆ ಹೊಡೆದೆ? ಇವೆಲ್ಲ ಚೆನ್ನಾಗಿರುವುದಿಲ್ಲ, ನೀನು ಬದುಕಿರುವುದೇ ನನ್ನ ಭಿಕ್ಷೆಯಿಂದ” ಎಂದು ತಮ್ಮಯ್ಯ ಅವರು ಬಸವನಹಳ್ಳಿ ಮತಗಟ್ಟೆ ಬಳಿ ನಗರಸಭೆ ಬಿಜೆಪಿ ಅಧ್ಯಕ್ಷನಿಗೆ ಗದರಿದ್ದಾರೆ. ಇದೇ ವೇಳೆ, ಬಿಜೆಪಿ ಕಾರ್ಯಕರ್ತರು ಕೂಡ ತಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ…