ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election) ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕಿಂತ ಪ್ರಚಾರದ ಅಬ್ಬರ, ಭಾರಿ ಭಾಷಣ, ಭರವಸೆಗಳ ಸುರಿಮಳೆಯ ಬಿಸಿಯೇ ಜಾಸ್ತಿಯಾಗಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿ ಕೇಂದ್ರದ ಹಲವು ಸಚಿವರು ಕರ್ನಾಟಕದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಆದರೆ, ಪ್ರಚಾರದ ಅಬ್ಬರದ ಮಧ್ಯೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಾವಣಗೆರೆ ಜಿಲ್ಲೆ ಹರಿಹರದ ಪ್ರಮುಖ ಮಠಗಳಿಗೆ ಭೇಟಿಯಾಗಿ, ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.
ಅಮಿತ್ ಶಾ ಅವರು ಮೊದಲು ಪಂಚಮಸಾಲಿ ಮಠಕ್ಕೆ ತೆರಳಿ ಶ್ರೀ ವಚನಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಹರಿಹರ ಹೊರವಲಯದಲ್ಲಿರುವ ಮಠಕ್ಕೆ ತೆರಳಿದ ಅಮಿತ್ ಶಾ, ಮಠದಲ್ಲಿ ಸ್ವಾಮೀಜಿಯವರೊಂದಿಗೆ ಸಂಚರಿಸಿದರು. ಮಠದ ಕುರಿತು ಮಾಹಿತಿ ಸೇರಿ ಸ್ವಾಮೀಜಿಯವರೊಂದಿಗೆ ಹಲವು ವಿಷಯಗಳ ಕುರಿತು ಮಾತನಾಡಿದರು. ಇದೇ ವೇಳೆ ಸ್ವಾಮೀಜಿಯವರು ಅಮಿತ್ ಶಾ ಅವರಿಗೆ ಬಸವಣ್ಣನವರ ಮೂರ್ತಿಯನ್ನು ಉಡುಗೊರೆ ನೀಡಿದರು.
ಕನಕ ಪೀಠಕ್ಕೆ ಭೇಟಿ
ಪಂಚಮಸಾಲಿ ಮಠದ ಬಳಿಕ ಅಮಿತ್ ಶಾ ಅವರು ಕನಕ ಪೀಠಕ್ಕೆ ಭೇಟಿ ನೀಡಿದರು. ಪೀಠಕ್ಕೆ ಭೇಟಿ ನೀಡಿ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮಿಜಿಯವರ ಆಶೀರ್ವಾದ ಪಡೆದರು.
ಅಮಿತ್ ಶಾ ಅವರಿಗೆ ಕಾಗಿನೆಲೆ ಶ್ರೀಗಳು ಕಂಬಳಿ ಹೊದಿಸಿ, ಭಂಡಾರ ಹಚ್ಚಿ ಸನ್ಮಾನ ಮಾಡಿದರು. ಹರಿಹರದಲ್ಲಿ ಕುರುಬರು ಹಾಗೂ ಪಂಚಮಸಾಲಿ ಮತಗಳು ಹೆಚ್ಚಿರುವ ಕಾರಣ ಅಮಿತ್ ಶಾ ಅವರು ಎರಡೂ ಮಠಗಳಿಗೆ ಭೇಟಿ ನೀಡಿರುವುದು ಪ್ರಾಮುಖ್ಯತೆ ಪಡೆದಿದೆ.
ಇದನ್ನೂ ಓದಿ: Karnataka Election 2023: ರಾಜ್ಯದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ: ಅಮಿತ್ ಶಾ