ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬಳಿಕ (Karnataka Election) ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿಯ ಪ್ರೀತಂ ಗೌಡ ನೀಡಿದ ಹೇಳಿಕೆ ಈಗ ಬಿಜೆಪಿಯಲ್ಲಿಯೇ ಭಿನ್ನಾಭಿಪ್ರಾಯ ಮೂಡಿಸಿದೆ. ಅದರಲ್ಲೂ, ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ಪ್ರೀತಂ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. “ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿಗಳು ಎಂಬುದಾಗಿ ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ. ಹಾಗಾಗಿ, ನೋ ಕಾಂಪ್ರೊಮೈಸ್” ಎಂದು ಸ್ಪಷ್ಟಪಡಿಸಿದ್ದಾರೆ. “ನೀವು ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಮತ ಹಾಕಿದಂತೆ. ಈ ಕುರಿತು ಮೋದಿ ಹಾಗೂ ದೇವೇಗೌಡರು ಈಗಾಗಲೇ ಮಾತುಕತೆ ನಡೆಸಿದ್ದಾರೆ” ಎಂದು ಪ್ರೀತಂ ಗೌಡ ಹೇಳಿದ್ದರು.
“ಪ್ರೀತಂ ಗೌಡ ಅವರು ನೀಡಿದ ಹೇಳಿಕೆ ವೈಯಕ್ತಿಕ ಅಷ್ಟೇ. ಅವರ ಹೇಳಿಕೆಗೂ, ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಬಿಜೆಪಿ ಯಾರ ಜತೆಗೂ ಹೊಂದಾಣಿ ಮಾಡಿಕೊಂಡಿಲ್ಲ. ಹಾಗೆ ನೋಡಿದರೆ, ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ನಮ್ಮ ಎದುರಾಳಿ ಜೆಡಿಎಸ್. ಜೆಡಿಎಸ್‌ಗೆ ನೀವು ಹಾಕುವ ಒಂದು ಮತವೂ ಕಾಂಗ್ರೆಸ್‌ಗೆ ಹೋಗುತ್ತದೆ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಹೇಳಿದ್ದಾರೆ. ನಮ್ಮದು ಹೊಂದಾಣಿಕೆ ರಹಿತ ರಾಜಕಾರಣ” ಎಂದು ಸಿ.ಎನ್. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದಾರೆ.
ಹತಾಶೆಯಿಂದ ಹೇಳಿಕೆ ಎಂದ ರೇವಣ್ಣ
ಪ್ರೀತಂ ಗೌಡ ಹೇಳಿಕೆ ಕುರಿತು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ. “ಹಾಸನದ ಶಾಸಕ ಪ್ರೀತಂ ಗೌಡ ಹತಾಶೆಯ ಹೇಳಿಕೆ ನೀಡಿದ್ದಾರೆ. ಅಲ್ಪಸಂಖ್ಯಾತರ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಆ ಗಿರಾಕಿಗೆ (ಪ್ರೀತಂ ಗೌಡ) ಒಂದು ಮಾತು ಹೇಳುತ್ತೇನೆ. ಮೋದಿ ಅವರ ಜತೆ ಕೂತಿದ್ದು ನಾವು. ಇವತ್ತು ರಾಜೀನಾಮೆ ನೀಡಿ, ನಾಳೆ ಪ್ರಮಾಣವಚನ ಸ್ವೀಕರಿಸಿ. ಐದು ವರ್ಷ ಯಾವುದೇ ಅಡೆತಡೆ ಇಲ್ಲದೆ ಆಡಳಿತ ಮಾಡಿ ಎಂದು ಹೇಳಿದ್ದರು. ಆದರೆ, ಕೋಮುವಾದಿಗಳ ಜತೆ ಹೋಗಬಾರದು ಎಂದು ನಾವು ಹೋಗಲಿಲ್ಲ” ಎಂಬುದಾಗಿ ಹೇಳಿದರು.
ಪ್ರೀತಂ ಗೌಡ ಹೇಳಿದ್ದೇನು?
ಹಾಸನದಲ್ಲಿ ಪ್ರಚಾರದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ್ದ ಪ್ರೀತಂ ಗೌಡ, “ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ. ನಿಮಗೆ ಅರ್ಥವಾಗಲಿ ಎಂಬುದಾಗಿ ಬಿಡಿಸಿ ಹೇಳುತ್ತಿದ್ದೇನೆ. ಜನತಾದಳಕ್ಕೆ ವೋಟು ಹಾಕಿದರೂ ಬಿಜೆಪಿಗೆ ವೋಟು ಹಾಕಿದ ಲೆಕ್ಕವೇ. ಎಚ್.ಡಿ.ದೇವೇಗೌಡರು ಹಾಗೂ ನರೇಂದ್ರ ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ಗೆ ಬರುವುದು 20-25 ಸೀಟು. ಹಾಗಾಗಿ, ಇಬ್ಬರೂ ಮಾತನಾಡಿಕೊಂಡಿದ್ದಾರೆ. ಬೆಂಗಳೂರಿಗೆ ಹೋಗಬೇಕು ಎಂದರೆ ಮೈಸೂರಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೂಲಕ ಬೆಂಗಳೂರಿಗೆ ಹೋಗಿ. ಇದರ ಮೇಲೆ ನಿಮ್ಮಿಷ್ಟ” ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: Karnataka Election 2023: ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಹಾಕಿದಂತೆ; ಮೈತ್ರಿ ಕುರಿತು ಪ್ರೀತಂ ಗೌಡ ಸುಳಿವು