ಬೆಂಗಳೂರು: ʻʻಪಿಎಫ್‍ಐ ಒತ್ತಡದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election) ಕಾಂಗ್ರೆಸ್‍ನ ಪ್ರಣಾಳಿಕೆ (Congress Manifesto) ಸಿದ್ಧಗೊಂಡಿದೆʼʼ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himant Biswa sharma) ಅವರು ಹೇಳಿದರು. ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ʻʻಬಜರಂಗ ದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್, ಪಿಎಫ್‍ಐ ಅನ್ನು ಏಕೆ ನಿಷೇಧಿಸಿರಲಿಲ್ಲ;; ಎಂದು ಪ್ರಶ್ನಿಸಿದ ಬಿಸ್ವಾಸ್ ಅವರು, ಕಾಂಗ್ರೆಸ್ ಇಂಡಿಯನ್ ಮುಸ್ಲಿಂ ಲೀಗ್‍ನೊಂದಿಗೆ ಮೈತ್ರಿ ಹೊಂದಿದೆ ಎಂದು ಹೇಳಿದರು.
ʻʻಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಪಿಎಫ್‍ಐ ಮತ್ತು ಮೂಲಭೂತವಾದಿ ಸಂಘಟನೆಗಳ ಪ್ರಣಾಳಿಕೆಯಂತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂಪಡೆದು, ಆ ಸಂಘಟನೆಯ 1,700 ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು ಎಂದು ಅವರು ಟೀಕಿಸಿದರು.
ʻʻಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಕರ್ನಾಟಕ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಇದು, ದೇಶಾದ್ಯಂತ ಏಕರೂಪ ನೀತಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ) ಸಹ ಇಂದಿನ ತುರ್ತು ಅಗತ್ಯವಾಗಿದೆʼʼ ಎಂದು ತಿಳಿಸಿದರು.
ʻʻಆಧಾರ್‌ನಿಂದ ಪೌರತ್ವ ದೃಢೀಕರಣವಾಗುವುದಿಲ್ಲ. ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ದೇಶದಲ್ಲಿ ಎನ್‍ಆರ್‍ಸಿ ಜಾರಿಯಾಗಿಲ್ಲ. ಸುದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಇಂದಿನವರೆಗೆ ಈ ಬಗ್ಗೆ ಚಕಾರವೆತ್ತಿಲ್ಲ. ಎನ್‍ಆರ್‍ಸಿ ಜಾರಿಗೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮವು, ರಾಷ್ಟ್ರವ್ಯಾಪಿ ಎನ್‍ಆರ್‍ಸಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆʼʼ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದರು.
ʻʻ40 ಪರ್ಸೆಂಟ್ ಕಮಿಷನ್ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಬೋಫೋರ್ಸ್ ಎಷ್ಟು ದೊಡ್ಡ ಹಗರಣ ಎಂಬುದನ್ನು ಕಾಂಗ್ರೆಸ್ ಅವಲೋಕಿಸಬೇಕು ಎಂದು ಹೇಳಿದರು ಹಿಮಂತ್ ಬಿಸ್ವಾ ಶರ್ಮ.
ರಾಹುಲ್ ಗಾಂಧಿಗೇ ಗ್ಯಾರಂಟಿ ಇಲ್ಲ
ʻʻಗ್ಯಾರಂಟಿ ನೀಡಲು ರಾಹುಲ್ ಗಾಂಧಿ ಯಾರುʼʼ ಎಂದು ಪ್ರಶ್ನಿಸಿದ ಬಿಸ್ವಾಸ್ ಅವರು, ʻʻರಾಹುಲ್ ಗಾಂಧಿ ಸಂಸದರೂ ಅಲ್ಲ. ಅವರ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಅವರು ಗ್ಯಾರಂಟಿ ನಿಜವಾಗಿದ್ದರೆ, ಅಮೇಥಿ ಅಭಿವೃದ್ಧಿಯಾಗಬೇಕಿತ್ತು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲಸಬೇಕಿತ್ತು. ರಾಮ ಮಂದಿರ- ಬಾಬರಿ ಮಸೀದಿ ವಿವಾದ ಇತ್ಯರ್ಥವಾಗಬೇಕಿತ್ತು. ಕರ್ನಾಟಕ ಜನರ ಪ್ರತಿಭೆ, ಪರಿಶ್ರಮದಿಂದ ರಾಜ್ಯ ಮುಂಚೂಣಿಯಲ್ಲಿದೆ. ರಾಹುಲ್ ಗಾಂಧಿ ಗ್ಯಾರಂಟಿಗಳಿಂದಲ್ಲʼʼ ಎಂದು ಆಕ್ಷೇಪಿಸಿದರು ಹಿಮಂತ್ ಬಿಸ್ವಾ ಶರ್ಮ.
ʻʻಕರ್ನಾಟಕ ನಂ.1 ರಾಜ್ಯವಾಗಲು ಬಿಜೆಪಿಗೆ, ನರೇಂದ್ರ ಮೋದಿಯವರಿಗೆ, ಭಾರತಕ್ಕೆ, ಕರ್ನಾಟಕಕ್ಕೆ ಮತ ನೀಡಬೇಕು. ಈ ಬಾರಿ ಬಿಜೆಪಿ 150 ಸ್ಥಾನ ಗೆಲ್ಲುತ್ತದೆʼʼ ಎಂದು ಹಿಮಂತ್ ಬಿಸ್ವಾ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಮರ ಮೀಸಲಾತಿ ರದ್ದು ಐತಿಹಾಸಿಕ ನಿರ್ಧಾರ
ʻʻಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ತೆಗೆದುಹಾಕಿ ಹಿಂದುಳಿದ ವರ್ಗಗಳಿಗೆ ಹಂಚುವ ಕರ್ನಾಟಕ ಸರ್ಕಾರದ ಕ್ರಮವೂ ಐತಿಹಾಸಿಕ. ಸಂವಿಧಾನದಲ್ಲಿ ಧಾರ್ಮಿಕ ಆಧಾರದಡಿ ಮೀಸಲಾತಿಗೆ ಅವಕಾಶವಿಲ್ಲ. ಡಾ.ಅಂಬೇಡ್ಕರ್ ಅವರು ಇದಕ್ಕೆ ವಿರುದ್ಧವಾಗಿದ್ದರು. ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಮೀಸಲಾತಿಯ ಮೂಲ ಸ್ವರೂಪವನ್ನು ಮತ್ತು ಸಂವಿಧಾನದ ಪ್ರಮುಖ ತತ್ವವನ್ನು ಕೊಲ್ಲಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ : Karnataka Election : ಬಿಜೆಪಿ ಕೈಗೆ ಸಿಕ್ತು ಬಜರಂಗದಳ ಅಸ್ತ್ರ; ನಿಷೇಧ ಪ್ರಸ್ತಾಪ ವಿರುದ್ಧ ಕೆಂಡಾಮಂಡಲ