ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಒಬ್ಬರು ಬಿಜೆಪಿಗೆ, ಮತ್ತೊಬ್ಬರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಅರಕಲಗೂಡು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎ.ಟಿ. ರಾಮಸ್ವಾಮಿ ಬೆಂಗಳೂರಿನಲ್ಲಿ ವಿಧಾನಸಭೆ ಕಾರ್ಯದರ್ಶಿ ಮೂಲಕ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಟಿ. ರಾಮಸ್ವಾಮಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಂತೋಷದಿಂದ ರಾಜೀನಾಮೆ ನೀಡಿದ್ದೇನೆ. ಕಾರ್ಯದರ್ಶಿ ಗೆ ರಾಜೀನಾಮೆ ನೀಡಿದ್ದೇನೆ, ಸ್ಪೀಕರ್ ಬಂದ ಬಳಿಕ ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ನಾನು ಇಂದೇ ಶಾಸಕರ ಭವನದ ಕೊಠಡಿ ಬಿಟ್ಟು ಕೊಡುತ್ತಿದ್ದೇನೆ. ಜೆಡಿಎಸ್ ನಾಯಕರು ನನಗೆ ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ನಾನು ಅಧಿಕಾರ ಆಸೆ ಪಡೆದವನಲ್ಲ. ನಾನು ವಿರೋಧ ಪಕ್ಷದವರ ಜತೆ ಸಹ ಉತ್ತಮವಾಗಿದ್ದೇನೆ. ನಾನು ರಾಜಕೀಯ ವಿರೋಧಿಗಳಿಗೂ ಒಳ್ಳೆಯದಾಗ್ಲಿ ಎಂದು ಭಾವಿಸುತ್ತೇನೆ. ಜನ ಸೇವೆಗಾಗಿ ಅವಕಾಶ ಸಿಕ್ಕಿತ್ತು.
ಮುಂದೆ ಅವಕಾಶ ಸಿಕ್ರೆ ಜನರ ಸೇವೆಗೆ ಮುಡುಪಾಗಿ ಇಡುತ್ತಿದ್ದೇನೆ. ಕರ್ನಾಟಕದ ರಾಜಕಾರಣ ಕೆಟ್ಟು ಹೋಗಿದೆ. ಒಲೈಕೆ ರಾಜಕಾರಣ ಜಾಸ್ತಿ ಆಗಿದೆ. ವಿಧಾನ ಸಭೆ ಮತ್ತು ಪರಿಷತ್ ಹಣದ ಸಭೆ ಆಗದೇ ಜನರ ಸಭೆ ಆಗಲಿ. ಜನರ ಹಿತಾಸಕ್ತಿಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಜೆಡಿಎಸ್ ಬಿಡಲಿಲ್ಲ. ಎಂದೂ ಸಹ ಸಹ ಜೆಡಿಎಸ್ ಬಿಡಲಿಲ್ಲ. ಎಲ್ಲ ಪಕ್ಷಗಳಲ್ಲೂ ಲೋಪದೋಷಗಳಿವೆ. ಮನಿ ಪವರ್ ಮುಂದೆ ಬಲಿಪಶು ಆದೆ. ಅಕ್ರಮಗಳನ್ನ ಎತ್ತಿ ಹಿಡಿದಿದ್ದೆ ಶಾಪ ಎನ್ನುವುದಾದರೆ ಅದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ ಎಂದರು.
ಯಾವ ಪಕ್ಷ ಸೇರುತ್ತೇನೆ ಎನ್ನುವ ಕುರಿತು ರಾಮಸ್ವಾಮಿ ಸ್ಪಷ್ಟವಾಗಿ ತಿಳಿಸಿಲ್ಲ. ಅವರು ಬಿಜೆಪಿ ಅಭ್ಯರ್ಥಿಯಾಗಿ ಅರಕಲಗೂಡಿನಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.
ಗೋಪಾಲಕೃಷ್ಣ ರಾಜೀನಾಮೆ
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ತೆರಳಿ ರಾಜೀನಾಮೆ ನೀಡಿದ್ದಾರೆ. ವಯಸ್ಸಿನ ಕಾರಣಕ್ಕೆ ರಾಜಕೀಯ ನಿವೃತ್ತಿ ಪಡೆಯಲು ರಾಜೀನಾಮೆ ನೀಡುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.
ಆದರೆ ಅವರು ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಕನ್ಪರ್ಮ್ ಮಾಡಿಕೊಂಡೇ ರಾಜೀನಾಮೆ ನೀಡಿದ್ದಾರೆ. ಹಿಂದಿನ ಎಲೆಕ್ಷನ್ ನಲ್ಲಿ ಟಿಕೆಟ್ ನಿಂದ ವಂಚಿತ ಆಗಿದ್ದ ಗೋಪಾಲಕೃಷ್ಣ, ಜನಾರ್ದನ ರೆಡ್ಡಿ, ಶ್ರೀರಾಮುಲು ಪ್ರಭಾವದಿಂದ ಕೂಡ್ಲಿಗಿಯಿಂದ ಸ್ಪರ್ಧಿಸಿದ್ದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Elections : ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ನಾಳೆ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್‌ಗೆ ಸೇರ್ಪಡೆ