ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ (Karnataka Election) ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿರುವ ಒಂದು ಅಂಶ ಈ ಭಾರಿ ಚರ್ಚೆಗೆ ಕಾರಣವಾಗಿದೆ. ವಿಶ್ವ ಹಿಂದು ಪರಿಷತ್ ಅಧೀನದಲ್ಲಿರುವ ಬಜರಂಗ ದಳ ಸಂಘಟನೆಯನ್ನು ನಿಷೇಧಿಸುವುದಾಗಿ (Bajarang dal Ban) ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದರ ವಿರುದ್ಧ ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ ಎಂದು ಸವಾಲು ಎಸೆದಿದ್ದಾರೆ.
ಬಜರಂಗ ದಳ ನಿಷೇಧ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಬಿಜೆಪಿ ಕೈಗೆ ಚುನಾವಣೆಯ ಸಂದರ್ಭದಲ್ಲಿ ಅಸ್ತ್ರ ಕೊಟ್ಟಂತಾಗಿದೆ ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿ ಕೂಡಾ ಇಂಥದೊಂದು ಹಿಂದುತ್ವದ ಅಸ್ತ್ರಕ್ಕಾಗಿ ಕಾಯುತ್ತಿತ್ತು. ಹೀಗಾಗಿ ಈಗ ಸಿಕ್ಕಿರುವ ಅಸ್ತ್ರವನ್ನು ಚೆನ್ನಾಗಿ ಬಳಸಿಕೊಳ್ಳುವ ಸೂಚನೆಯನ್ನು ಈಗಾಗಲೇ ಅದು ನೀಡಿದೆ. ಬಿಜೆಪಿ ನಾಯಕರು ಮತ್ತು ಹಿಂದು ಸಂಘಟನೆಗಳ ಮುಖಂಡರು ಆಗಲೇ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.
ಪಿಎಫ್‌ಐ ನಿಷೇಧಕ್ಕೆ ಪ್ರತಿಕಾರವೇ ಎಂದು ಕೇಳಿದ ಸುನಿಲ್ ಕುಮಾರ್
ಬಜರಂಗ ದಳ ನಿಷೇಧ ಪ್ರಸ್ತಾಪವನ್ನು ಖಂಡಿಸಿ ಟ್ವೀಟ್ ಮಾಡಿರುವ ಇಂಧನ ಸಚಿವ ಸುನಿಲ್ ಕುಮಾರ್ ಅವರು, ಇದು ಪಿಎಫ್‌ಐ ನಿಷೇಧಕ್ಕೆ ಪ್ರತಿಕಾರವೇ ಎಂದು ಪ್ರಶ್ನಿಸಿದ್ದಾರೆ.
ʻʻಕಾಂಗ್ರೆಸ್ ಹಾಗೂ ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖ. ಬಜರಂಗದಳ ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ. ಡಿಕೆಶಿ, ಸಿದ್ದರಾಮಯ್ಯನವರೇ, ನಾವು ಪಿಎಫ್ ಐ ನಿಷೇಧ ಮಾಡಿದ್ದೇವೆ. ಅದೇ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ? ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರʼʼ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ʻʻಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದೂಗಳ ರಕ್ಷಣೆಗೆ, ಗೋಮಾತೆಯ ಹಿತಕ್ಕೆ, ಹಿಂದು ಸೋದರಿಯರ ಮಾನ ಸಂರಕ್ಷಣೆಗೆ ಸಿದ್ಧವಾಗಿರುವ ಕಾರ್ಯಕರ್ತರ ಪಡೆ. ಮುಸ್ಲಿಂ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾರ್ಷ್ಟ್ಯವೇʼʼ ಎಂದು ಪ್ರಶ್ನಿಸಿದ್ದಾರೆ ಸುನಿಲ್ ಕುಮಾರ್.
ʻʻಭಜರಂಗ ದಳ ಹಾಗೂ ಪಿಎಫ್ ಐನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ. ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಭಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ?ʼʼ ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್‌ಗೆ ಸವಾಲು ಹಾಕಿದ ಸಂಸದ ಮುನಿಸ್ವಾಮಿ
ʻʻಕಾಂಗ್ರೆಸ್‌ನವರಿಗೆ ತಾಕತ್ ಇದ್ರೆ ಬಜರಂಗ ದಳ ಬ್ಯಾನ್ ಮಾಡಲಿ. ಅವರಿಗೆ ತಾಕತ್ ಇದ್ರೆ ರಿಸರ್ವೇಷನ್ ಮುಟ್ಟಿ ನೋಡಲಿ.ʼʼ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ್ದಾರೆ ಕೋಲಾರ ಸಂಸದ ಮುನಿಸ್ವಾಮಿ.
ಬಜರಂಗ ದಳ ದೇವರು ನಿರ್ಮಿಸಿದ ಸಂಘಟನೆ ಎಂದ ರಘು ಸಕಲೇಶಪುರ
ʻʻಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುತ್ತೇನೆ ಎಂದು ಘೋಷಿಸಿರುವುದು ಹಾಸ್ಯಾಸ್ಪದ. ಈ ವಿಚಾರದಲ್ಲಿ ಕಾಂಗ್ರೆಸ್ ಬಹಳ ಗಂಭೀರ ಹಾಗೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭಜರಂಗದಳ ಸಂಘಟನೆ ದೇವರು ನಿರ್ಮಾಣ ಮಾಡಿರೋ ಸಂಘಟನೆ. ಇದೊಂದು ದೇಶಭಕ್ತ ಸಂಘಟನೆಯಾಗಿದೆʼʼ ಎಂದು ಬಜರಂಗ ದಳ ಸಂಘಟನೆ ಮುಖಂಡ ರಘು ಸಕಲೇಶಪುರ ಆಕ್ರೋಶ ಹೇಳಿದ್ದಾರೆ.
ʻʻದೇಶಕ್ಕೆ ಏನಾದರೂ ಆಪತ್ತು ಬರುತ್ತದೆ ಅಂದರೆ ಬಜರಂಗ ದಳದ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಇಂತಹ ದೇಶಭಕ್ತ ಸಂಘಟನೆಯನ್ನು ಕಾಂಗ್ರೆಸ್ ಮಾತ್ರವಲ್ಲ ಯಾವುದೇ ಪಕ್ಷ ಬಂದರೂ, ಹತ್ತಾರು ಪಕ್ಷಗಳು ಒಗ್ಗೂಡಿದರೂ ನಿಷೇಧ ಮಾಡೋದಕ್ಕೆ ಸಾಧ್ಯವಿಲ್ಲʼʼ ಎಂದು ಹೇಳಿದರು.
ʻʻಲೋಕಸಭೆಯಲ್ಲಿ 430ಕ್ಕೂ ಅಧಿಕ ಸ್ಥಾನವಿದ್ದಾಗಲೇ ಆರೆಸ್ಸೆಸ್‌ನ್ನು ಬ್ಯಾನ್ ಮಾಡ್ತೀವಿ ಅಂತಾ ಹೋಗಿದ್ದರು. ಆಗಲೇ ಬ್ಯಾನ್ ಮಾಡೋದಕ್ಕೆ ಆಗಿರಲಿಲ್ಲ. ಈಶ್ವರ ಕಾರ್ಯವನ್ನು ಮಾಡುತ್ತಿರುವಂಥ ಈ ಸಂಘನೆಗಳ ಬಗ್ಗೆ, ಆಂಜನೇಯನ ಶಕ್ತಿ ಇರುವ ಬಜರಂಗ ದಳದಂತಹ ಸಂಘಟನೆಯನ್ನು ನಿಷೇಧ ಮಾಡುವ ಮಾತಾಡಿರುವಂತಹ ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಈಗಾಗಲೇ ಕಾಂಗ್ರೆಸ್ ಕಟ್ಟಕಡೆಯ ದಿನಗಳನ್ನು ಎಣಿಸುತ್ತಿದೆ. ಇದೀಗ ಇಂಥ ಹೇಳಿಕೆಗಳ ಮೂಲಕ ಹಿಂದೂ ಸಮಾಜ ಹಾಗೂ ಹಿಂದೂ ಸಂಘಟನೆಗಳ ಭಾವನೆಗೆ ಧಕ್ಕೆ ತಂದಿದೆ. ಇದರ ವಿರುದ್ಧ ಬಜರಂಗ ದಳ ಸಂಘಟನೆ ಹೋರಾಡುತ್ತದೆʼ ಎಂದಿರುವ ರಘು ಸಕಲೇಶಪುರ ಅವರು, ಇನ್ನು 30 ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಭವಿಷ್ಯ ನುಡಿದರು.
ಹಿಂದೂ ವಿರೋಧಿ ಮಾನಸಿಕತೆ ಎಂದ ಮೋಹನ್ ಗೌಡ
ಬೆಂಗಳೂರಿನಲ್ಲಿ ಮಾತನಾಡಿದ ಹಿಂದು ಜಾಗೃತಿ ಸಮಿತಿ ಮುಖಂಡ ಮೋಹನ್ ಗೌಡ ಅವರು, ಕಾಂಗ್ರೆಸ್ ಪ್ರಣಾಳಿಕೆ ಖಂಡನೀಯ. ಹಿಂದೂ ಧರ್ಮ, ದೇವಸ್ಥಾನ, ಹಿಂದೂ ಯುವತಿಯರನ್ನು ರಕ್ಷಣೆ ಮಾಡುವ ಹಿಂದುತ್ವವಾದಿ ಸಂಘಟನೆ ಬಜರಂಗದಳ. ಇದು ಕಾನೂನು ಚೌಕಟ್ಟಿನಲ್ಲಿ ರಚನೆ ಆಗಿರುವ ಸಂಘಟನೆ. ಇದನ್ನು ನಿಷೇಧಿಸುವ ಮಾತನಾಡಿರುವ ಕಾಂಗ್ರೆಸ್‌ನ ಹಿಂದೂ ವಿರೋಧಿ ಮಾನಸಿಕತೆ ಇಲ್ಲಿ ಎದ್ದು ಕಾಣುತ್ತಿದೆʼʼ ಎಂದು ಹೇಳಿದರು.
ʻʻಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ, ದಂಗೆ, ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿದ್ದ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಹೊಂದಿತ್ತಾʼʼ ಎಂದು ಕೇಳಿದ ಅವರು, ʻʻಮುಸ್ಲಿಂ ಒಲೈಕೆಗಾಗಿ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ನೀತಿ ಅನುಸರಿಸ್ತಾ ಇದೆ. ಇಂತಹ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕುʼʼ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಕುಟಿಲ ನೀತಿ ಮನೆ ಮನೆಗೆ ತಲುಪಿಸಿ ಎಂದ ಶರಣ್ ಪಂಪ್‌ವೆಲ್
ʻʻಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್‌ನ ಈ ಕುಟಿಲ ನೀತಿಯನ್ನು ತಿಳಿಸಬೇಕು. ಕಾಂಗ್ರೆಸನ್ನು ಸೋಲಿಸಲು ಎಲ್ಲರೂ ಶ್ರಮ ಹಾಕಬೇಕುʼʼ ಎಂದು ಮಂಗಳೂರಿನ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹೇಳಿದರು.
ʻʻಬಜರಂಗ ದಳ ರಾಷ್ಟ್ರೀಯ ಸಂಘಟನೆಯಾಗಿದೆ. ದೇಶದ 60 ಸಾವಿರ ಹಳ್ಳಿಗಳಲ್ಲಿ ಬಜರಂಗದಳ ಇದೆ. ಬಜರಂಗ ದಳ ಎಂದೂ ರಾಷ್ಟ್ರ ವಿರೋಧಿ ಕಾರ್ಯ ಮಾಡಿಲ್ಲ. ಹಿಂದು ಹೆಣ್ಣುಮಕ್ಕಳು, ಗೋವು ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ಪಿಎಫ್ ಐ ಮತೀಯ ಸಂಘಟನೆ, ರಾಷ್ಟ್ರ ದ್ರೋಹಿ ಸಂಘಟನೆ. ಬಜರಂಗ ದಳವನ್ನು ಪಿಎಫ್ಐ ಜೊತೆ ಹೋಲಿಸೋದು ಸರಿಯಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻಕಾಂಗ್ರೆಸ್‌ನಲ್ಲಿರುವ ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ಬಜರಂಗ ದಳವನ್ನು ನಿಷೇಧ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್ ನಲ್ಲಿರುವ ಹಿಂದೂಗಳು ಅರಿಯಬೇಕುʼʼ ಎಂದು ಹೇಳಿದ್ದಾರೆ.
ತಾಕತ್ತು ಇದ್ದರೆ ಬ್ಯಾನ್ ಮಾಡಿ ಎಂದ ಶೋಭಾ ಕರಂದ್ಲಾಜೆ
ʻʻನಿಮ್ಮ ಅಜ್ಜಿ, ತಾತನ ಕಾಲದಲ್ಲಿ ಆರ್‌ಎಸ್‌ಎಸ್ (RSS) ಅನ್ನು ಬ್ಯಾನ್ ಮಾಡಿದ್ದಿರಿ. ಆದರೆ, ಏನೂ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈಗ ನಾವು ವಿಶ್ವದ, ದೇಶದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದಿದ್ದೇವೆ. ನಾನು ನಿಮಗೆ ಬಹಿರಂಗ ಸವಾಲನ್ನು ಹಾಕುತ್ತಿದ್ದೇನೆ. ನಿಮಗೆ ತಾಕತ್ತು ಇದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ. ನನ್ನನ್ನು ಬಂಧಿಸಿʼʼ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿತ್ತು. ಆದರೆ, ಇವತ್ತು ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್‌ಎಸ್ ಆಗಿದೆ. ಆರ್‌ಎಸ್‌ಎಸ್ ವಿವಿಧ ವಿಭಾಗ ಕೆಲಸ ಮಾಡುತ್ತಿದೆ. ನಿಮ್ಮ ಅಜೆಂಡಾ ಹಿಂದುಗಳ ಹತ್ಯೆ, ಬಾಂಬ್ ಬ್ಲಾಸ್ಟ್, ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡುವುದಾಗಿದೆ. ಈ ರೀತಿ ಮಾಡುವವರನ್ನು ಬ್ಯಾನ್ ಮಾಡಲು ನಿಮಗೆ ಆಗುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ ತೋರಿಸಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಇದನ್ನೂ ಓದಿ : Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ