ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣಾ (Karnataka Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾಗಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಾಮಲೈ ಅವರನ್ನು ನೇಮಕ ಮಾಡಿದ್ದ ಬಿಜೆಪಿ ಹೈಕಮಾಂಡ್, ಇನ್ನೊಬ್ಬ ಸಹ ಉಸ್ತುವಾರಿಯನ್ನು ನೇಮಿಸಿ ಪ್ರತ್ಯೇಕ ಆದೇಶ ಹೊರಡಿಸಿದೆ.
ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿರುವ ಮನಸುಖ್ ಮಂಡಾವಿಯಾ ಅವರನ್ನು ಅಣ್ಣಾಮಲೈ ಅವರ ಜತೆ ಸಹ ಉಸ್ತುವಾರಿಯಾಗ ನೇಮಿಸಲಾಗಿದೆ. ಮನಸುಖ್ ಮಂಡಾವಿಯಾ ಅವರು ಕಾರ್ಯತಂತ್ರ ನಿಪುಣರಾಗಿರುವ ಜತೆಗೆ ಸಾಮಾಜಿಕ ಜಾಲ ತಾಣ ನಿರ್ವಹಣೆಯನ್ನೂ ಸಾಕಷ್ಟು ಪ್ರಬಲರಾಗಿ ಗಮನ ಸೆಳೆದಿದ್ದಾರೆ. ಹೀಗಾಗಿ ಅವರನ್ನು ಅಣ್ಣಾಮಲೈ ಅವರ ಜತೆಗೆ ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅನುಭವಿ ಉಸ್ತುವಾರಿಗಳು
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಧರ್ಮೇಂದ್ರ ಪ್ರದಾನ್ ಅವರು ರಾಜ್ಯ ರಾಜಕೀಯದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಅತ್ಯಂತ ಸಂಕಷ್ಟ ಕಾಲವನ್ನು ಎದುರಿಸಿದ್ದ 201೩ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಉಸ್ತುವಾರಿ ಆಗಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಇಲ್ಲಿನ ರಾಜಕೀಯ ಸಮೀಕರಣಗಳೆಲ್ಲದರ ಅರಿವಿದೆ.
2013ರಲ್ಲಿ ಬಿಜೆಪಿ ವಿಭಜನೆ ಆಗಿ ಯಡಿಯೂರಪ್ಪ ಅವರಂಥ ನಾಯಕರೇ ಹೊಸ ಪಕ್ಷವನ್ನು ಕಟ್ಟಿದ್ದರು. ಶ್ರೀರಾಮುಲು ಬಿಆರ್‌ಎಸ್ ಪಕ್ಷವನ್ನು ಕಟ್ಟಿದ್ದರು. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಂಡು ಅಧಿಕಾರವನ್ನೂ ಕಳೆದುಕೊಂಡಿತು. ಆದರೂ ಒಟ್ಟಾರೆ ಮತ ಗಳಿಕೆಯಲ್ಲಿ ಹಿನ್ನಡೆ ಆಗಿರಲಿಲ್ಲ.
ಅತ್ಯಂತ ಸಂಕಷ್ಟ ಕಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದ ಧರ್ಮೇಂದ್ರ ಪ್ರಧಾನ್ ಅವರ ಅನುಭವವನ್ನು ಗಮನಿಸಿ ಈ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ.
ಇದರ ಜತೆಗೆ ಸಹ ಉಸ್ತುವಾರಿಯಾಗಿ ನೇಮಕಗೊಂಡಿರುವ ಅಣ್ಣಾಮಲೈ ರಾಜ್ಯದ ಹಲವು ಕಡೆಗಳಲ್ಲಿ ಎಎಸ್‌ಪಿ ಹುದ್ದೆಯಿಂದ ಉನ್ನತ ಹುದ್ದೆವರೆಗೆ ಕರ್ತವ್ಯ ನಿರ್ವಹಣೆ ಮಾಡಿದವರು. ಪ್ರಸಕ್ತ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅವರಿಗೆ ರಾಜ್ಯದ ಎಲ್ಲ ವಿಚಾರಗಳ ಅರಿವಿದೆ ಎನ್ನುವುದು ಪ್ಲಸ್ ಪಾಯಿಂಟ್ ಆಗಲಿದೆ.
ಮನಸುಖ್ ಮಂಡಾವಿಯಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಬಲವರ್ಧನೆ, ಚುನಾವಣೆ ಪ್ರಚಾರದಲ್ಲಿ ಹೆಚ್ಚಿನ ಶಕ್ತಿ ವಿನಿಯೋಗ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : Karnataka Election: ಪ್ರಜಾಧ್ವನಿಗೆ ಇರುವುದು ಎರಡೇ ಬಸ್; 4 ಇದ್ದಿದ್ರೆ ನಾನೂ ಸಾರಥಿ ಆಗ್ತಿದ್ದೆ: ಡಾ.ಜಿ.ಪರಮೇಶ್ವರ್