Site icon Vistara News

Karnataka Election : ಕಾಂಗ್ರೆಸ್‌ ಸರ್ಕಾರ ತಕ್ಷಣವೇ ಗ್ಯಾರಂಟಿಗಳನ್ನು ಜಾರಿಗೆ ತರಬೇಕು; ಬಿಜೆಪಿ ಆಗ್ರಹ

BJP asks Congress to implement guarantees

BJP asks Congress to implement guarantees

ಬೆಂಗಳೂರು: ʻʻರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆದ್ದಿರುವ ಕಾಂಗ್ರೆಸ್ ಪಕ್ಷವು ಸರಕಾರ ರಚಿಸಿದ ತಕ್ಷಣವೇ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕುʼʼ ಎಂದು ಬಿಜೆಪಿ (Karnataka BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ “ಜಗನ್ನಾಥ ಭವನ”ದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 200 ಯುನಿಟ್‌ವರೆಗೆ ವಿದ್ಯುತ್ ಬಿಲ್ ಇಲ್ಲ, ಮನೆಯ ಯಜಮಾನಿಗೆ 2 ಸಾವಿರ ರೂ. ನೀಡುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ 3 ಸಾವಿರ/1500 ರೂ. ಸಹಾಯಧನ ಕೊಡುಗೆ ವಿಚಾರದಲ್ಲಿ ಜನರಲ್ಲಿ ಗೊಂದಲವಿದೆ. ಸರಕಾರ ರಚಿಸಿದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಅದರ ಕುರಿತು ತೀರ್ಮಾನ ಕೈಗೊಳ್ಳಬೇಕುʼʼ ಎಂದು ಅವರು ರಾಜ್ಯ ಬಿಜೆಪಿ ಪರವಾಗಿ ಆಗ್ರಹಿಸಿದರು.

ಕೃಷಿ ಚಟುವಟಿಕೆಗೆ ಸಹಕಾರ ನೀಡಲಿ

ರಾಜ್ಯದ ನೂತನ ಸರಕಾರವು ತಕ್ಷಣ ಎಚ್ಚತ್ತುಕೊಂಡು ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಸಾಲಕ್ಕೆ ಅರ್ಜಿ ಕರೆಯಬೇಕು ಎಂದು ತಿಳಿಸಿದರು. ಮಳೆ ಈಗಾಗಲೇ ವಿಳಂಬವಾಗಿದೆ. ಆದರೆ, ಕೃಷಿ ಚಟುವಟಿಕೆ ಆರಂಭವಾಗಬೇಕಿದೆ ಎಂದು ಅವರು ತಿಳಿಸಿದರು. ಕೂಡಲೇ ಕಾಂಗ್ರೆಸ್ ಪಕ್ಷವು ಸರಕಾರ ರಚಿಸಿ, ಜನತೆಗೆ ಮತ್ತು ಕೃಷಿ ಚಟುವಟಿಕೆಗೆ ಸಹಕರಿಸಬೇಕು. ಕೃಷಿ ಸಾಲ, ಬಿತ್ತನೆ ಬೀಜ ಮತ್ತು ಗೊಬ್ಬರ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಡಿ

ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರು ತಮ್ಮ ಕೊರತೆಗಳನ್ನು ಬಿಜೆಪಿ ಮೇಲೆ ಹೇರಲು ಮುಂದಾಗಿದ್ದರು. ತಮ್ಮ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಇದೀಗ ಶಾಸಕಾಂಗ ಪಕ್ಷದ ಸಭೆ ಕರೆದು ಒಂದು ಅಂತಿಮ ತೀರ್ಮಾನಕ್ಕೆ ಬಂದಿದೆ. ನಿಮ್ಮ ಕೊರತೆಯೇ ವಿಳಂಬಕ್ಕೆ ಕಾರಣ ಎಂದು ಟೀಕಿಸಿದ ಅವರು, ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಡಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷವು ರಾಜ್ಯ ಅಸೆಂಬ್ಲಿಯಲ್ಲಿ ಪೂರ್ಣ ಪ್ರಮಾಣದ ಬಹುಮತ ಪಡೆದು ಹಲವು ದಿನಗಳು ಕಳೆದರೂ ಮುಖ್ಯಮಂತ್ರಿ ಆಯ್ಕೆಯು ಕಗ್ಗಂಟಾಗಿತ್ತು. ಇವತ್ತು ಅದು ಬಗೆಹರಿದಂತೆ ಕಾಣುತ್ತಿದೆ. ಜನರು ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದು ಬಿಜೆಪಿ ಅದನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದರು.

ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ 66 ಸ್ಥಾನಕ್ಕೆ ಸೀಮಿತಗೊಂಡಿದ್ದರೆ ಜಾತ್ಯತೀತ ಜನತಾದಳವು 19 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಪಕ್ಷೇತರರು ಸೇರಿದಂತೆ ನಾಲ್ವರು ಇತರರು ಇದ್ದಾರೆ. ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳ ಕಾಲ ಭಾರಿ ಸಮಾಲೋಚನೆ ನಡೆದು ಸಿಎಂ ಆಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಡಿ.ಕೆ. ಶಿವಕುಮಾರ್‌ ಅವರನ್ನು ಡಿಸಿಎಂ ಹುದ್ದಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ : Karnataka CM: ಜಾಲಿ ಮೂಡಲ್ಲಿ ಭಾವಿ ಸಿಎಂ: ಬೈಟ್‌ ಕೇಳಿದ್ದಕ್ಕೆ ಶಿಳ್ಳೆ ಹೊಡೆದ ಸಿದ್ದರಾಮಯ್ಯ

karnataka-election : BJP asks Congress to enforce guarantee programmes

Exit mobile version